ದೇಶ

ಭಾರತದಲ್ಲಿ ಕೊರೋನಾ ಏರಿಕೆ: ದೇಶದಲ್ಲಿಂದು 45,083 ಹೊಸ ಕೇಸ್ ಪತ್ತೆ, 460 ಮಂದಿ ಸಾವು

Manjula VN

ನವದೆಹಲಿ: ಕೆಲ ದಿನಗಳಿಂದ ಭಾರತದಲ್ಲಿ ಇಳಿಕೆಯ ಹಾದಿಯಲ್ಲಿದ್ದ ಮಹಾಮಾರಿ ಕೊರೋನಾ ಸೋಂಕು ಮತ್ತೆ ಏರಿಕೆಯಾಗಲು ಆರಂಭವಾಗಿದ್ದು, ದೇಶದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 45,083 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 460 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. 

ಭಾನುವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,26,95,030ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,37,830ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,68,558ಕ್ಕೆ ತಲುಪಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 35,840 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,18,88,642ಕ್ಕೆ ತಲುಪಿದೆ. 

ಇನ್ನು ಭಾರತದಲ್ಲಿ ಒಂದೇ 17,55,327 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, 51,86,42,929 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. 

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 63.09 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ

SCROLL FOR NEXT