ದೇಶ

ಜೈಶಂಕರ್ ಒಳಗೊಂಡ ಉನ್ನತ ಮಟ್ಟದ ತಂಡದಿಂದ ಅಫ್ಘಾನಿಸ್ತಾನ ಬೆಳವಣಿಗೆಗಳ ಮೇಲ್ವಿಚಾರಣೆ

Lingaraj Badiger

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಂಡ ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಈ ಗುಂಪು ಕಳೆದ ಕೆಲವು ದಿನಗಳಿಂದ ನಿಯಮಿತವಾಗಿ ಸಭೆ ನಡೆಸುತ್ತಿದೆ. "ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಹಿಂದಿರುಗಿಸುವುದು, ಅಫ್ಘಾನ್ ಪ್ರಜೆಗಳು ವಿಶೇಷವಾಗಿ ಅಲ್ಪಸಂಖ್ಯಾತರು ಭಾರತಕ್ಕೆ ಪ್ರಯಾಣಿಸುವುದು ಮತ್ತು ಅಫ್ಘಾನಿಸ್ತಾನವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಬಳಸದಂತೆ ನೋಡಿಕೊಳ್ಳುವುದರ ಬಗ್ಗೆ ನಿಗಾವಹಿಸಲು ಸೂಚಿಸಲಾಗಿದೆ ಎನ್ನಲಾಗಿದೆ.

ಇನ್ನೂ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದು ಭಾರತದ ತಕ್ಷಣದ ಆದ್ಯತೆಯಾಗಿದೆ. ಭಾರತದ ವಿರುದ್ಧ ಭಯೋತ್ಪಾದನೆಗೆ ಅಫಘಾನ್ ನೆಲ ಬಳಸುವುದಿಲ್ಲ ಎಂದು ಖಾತರಿಪಡಿಸಿಕೊಳ್ಳಲು ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಂಡ ರಚಿಸಲಾಗಿದ್ದು, ಭಾರತದ ತಕ್ಷಣದ ಆದ್ಯತೆಗಳ ಮೇಲೆ ಕೇಂದ್ರೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಈ ತಂಡಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಇಂದು ಬೆಳಗ್ಗೆ ಅಂಗೀಕರಿಸಿದ ನಿರ್ಣಯ ಸೇರಿದಂತೆ ಅಫ್ಘಾನಿಸ್ತಾನ ನೆಲದ ಪರಿಸ್ಥಿತಿ ಮತ್ತು ಅಂತರಾಷ್ಟ್ರೀಯ ಪ್ರತಿಕ್ರಿಯೆಗಳನ್ನೂ ಈ ತಂಡ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT