ದೇಶ

'ಯುಪಿಎ ಎಂದರೇನು? ಈಗ ಯುಪಿಎ ಇಲ್ಲ': ಶರದ್ ಪವಾರ್ ಭೇಟಿ ಬಳಿಕ ಮಮತಾ ಬ್ಯಾನರ್ಜಿ

Lingaraj Badiger

ಮುಂಬೈ: "ಯುಪಿಎ ಎಂದರೇನು? ಈಗ ಯುಪಿಎ ಇಲ್ಲ" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಹೇಳಿದ್ದಾರೆ.

ಮೂರು ದಿನಗಳ ಮುಂಬೈ ಭೇಟಿಯಲ್ಲಿರುವ ಮಮತಾ ಬ್ಯಾನರ್ಜಿ ಅವರು ಇಂದು ಮುಂಬೈನಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ಮುಖ್ಯಸ್ಥೆ, "ಈಗ ನಡೆಯುತ್ತಿರುವ ಫ್ಯಾಸಿಸಂ" ವಿರುದ್ಧ ಹೋರಾಡಲು ದೃಢವಾದ ಪರ್ಯಾಯ ತಂಡವನ್ನು ರಚಿಸಬೇಕಿದೆ ಎಂದಿದ್ದಾರೆ.

ಶರದ್ ಪವಾರ್ ಅವರು ಹಿರಿಯ ನಾಯಕರು. ನಮ್ಮ ರಾಜಕೀಯ ಪಕ್ಷಗಳ ಬಗ್ಗೆ ಚರ್ಚಿಸಲು ಇಲ್ಲಿಗೆ ಬಂದಿದ್ದೇನೆ. ಶರದ್ ಅವರು ಹೇಳಿದ್ದಕ್ಕೆ ನನ್ನ ಸಹಮತವಿದೆ ಎಂದು ಮಮತಾ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಮಮತಾ ಬ್ಯಾನರ್ಜಿ, ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುವುದು ತುಂಬಾ ಸುಲಭ ಎಂದಿದ್ದರು.

ಮಮತಾ ಬ್ಯಾನರ್ಜಿ ಅವರು ಮಂಗಳವಾರ ಶಿವಸೇನೆ ನಾಯಕರಾದ ಸಂಜಯ್ ರೌತ್ ಮತ್ತು ಆದಿತ್ಯ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು.

SCROLL FOR NEXT