ದೇಶ

ಬಿಹಾರ ಸಿಎಂ ನಿತೀಶ್ ಕುಮಾರ್ ನನ್ನ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ: ಬಿಜೆಪಿ ಶಾಸಕಿ ಆರೋಪ

Lingaraj Badiger

ಪಾಟ್ನಾ: ಈ ವಾರದ ಆರಂಭದಲ್ಲಿ ನಡೆದ ಆಡಳಿತಾರೂಢ ಎನ್‌ಡಿಎಯ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಎಂದು ಬಿಹಾರದ ಬಿಜೆಪಿ ಶಾಸಕಿಯೊಬ್ಬರು ಶುಕ್ರವಾರ ಆರೋಪಿಸಿದ್ದಾರೆ.

ಕಟೋರಿಯಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮತ್ತು ಬಿಜೆಪಿ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ನಿಕ್ಕಿ ಹೆಂಬ್ರೋಮ್ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಎನ್ ಡಿಎ ಶಾಸಕರ ಸಭೆಯಲ್ಲಿ ನಾನು ನಿಷೇಧ ಕಾನೂನಿನಿಂದ ಬುಡಕಟ್ಟು ಜನಾಂಗದವರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಿಷಯವನ್ನು ಪ್ರಸ್ತಾಪಿಸಿದಾಗ ನಿತೀಶ್ ಕುಮಾರ್ ಅವರು ಆಕ್ಷೇಪಾರ್ಹ ಭಾಷೆ ಬಳಸಿ ತನಗೆ ಛೀಮಾರಿ ಹಾಕಿದರು ಎಂದು ಶಾಸಕಿ ದೂರಿದ್ದಾರೆ.

"ನಾನು ಪರಿಶಿಷ್ಟ ಪಂಗಡಕ್ಕೆ ಸೇರಿದವಳಾಗಿದ್ದೇನೆ ಮತ್ತು ಜನರು ಸಾಂಪ್ರದಾಯಿಕವಾಗಿ ಮಹುವಾ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ, ಇದನ್ನು ಈಗ ನಿಷೇಧ ಕಾನೂನಿನಡಿಯಲ್ಲಿ ನಿಷೇಧಿಸಲಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

"ಸೋಮವಾರ ನಡೆದ ಎನ್‌ಡಿಎ ಶಾಸಕರ ಸಭೆಯಲ್ಲಿ ಅವರ ಕಷ್ಟದ ವಿಷಯವನ್ನು ಪ್ರಸ್ತಾಪಿಸುವುದು ನನ್ನ ಕರ್ತವ್ಯವಾಗಿತ್ತು. ಆದರೆ ಸಿಎಂ ಮಾತನಾಡುವ ರೀತಿ ನನಗೆ ಆಘಾತ ತಂದಿದೆ. ಅವರು ಬಳಸಿದ ಭಾಷೆ ಪುನರಾವರ್ತಿಸಲು ನಾನು ಬಯಸುವುದಿಲ್ಲ. ಬದಲಿಗೆ ನಾನು ವಿಷಯಕ್ಕೆ ಆದ್ಯತೆ ನೀಡುತ್ತೇನೆ" ಎಂದು ಹೆಂಬ್ರೋಮ್ ಅವರು ಹೇಳಿದ್ದಾರೆ.

SCROLL FOR NEXT