ದೇಶ

ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಮಹಾರಾಷ್ಟ್ರ ವ್ಯಕ್ತಿಗೆ ಓಮಿಕ್ರಾನ್ ದೃಢ, ದೇಶದಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ

Lingaraj Badiger

ಮುಂಬೈ: ದಕ್ಷಿಣ ಆಫ್ರಿಕಾದಿಂದ ದುಬೈ ಹಾಗೂ ದೆಹಲಿ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ಆಗಮಿಸಿದ ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಪ್ರದೇಶದ ವ್ಯಕ್ತಿಯೊಬ್ಬರಿಗೆ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಮೊದಲ ಪ್ರಕರಣ ಮತ್ತು ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

33 ವರ್ಷದ ಸೋಂಕಿತ ವ್ಯಕ್ತಿ ನವೆಂಬರ್ 23 ರಂದು ದೆಹಲಿಗೆ ಬಂದಿದ್ದರು ಮತ್ತು ದೆಹಲಿ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಪರೀಕ್ಷೆಗಾಗಿ ಅವರ ಮಾದರಿಗಳನ್ನು ನೀಡಿದ್ದರು. ನಂತರ ಅವರು ಮುಂಬೈಗೆ ವಿಮಾನದಲ್ಲಿ ತೆರಳಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕರ್ನಾಟಕ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ಈಗಾಗಲೇ ಪತ್ತೆಯಾಗಿವೆ. ಇದೀಗ ಮಹಾರಾಷ್ಟ್ರದಲ್ಲೂ ಒಂದು ಪ್ರಕರಣ ವರದಿಯಾಗಿದೆ.

"ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ಬಂದಿದೆ. ಇದು ರಾಜ್ಯದ ಮೊದಲ ಅಧಿಕೃತ ಪ್ರಕರಣವಾಗಿದೆ" ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ ಅರ್ಚನಾ ಪಾಟೀಲ್ ಅವರು ಮುಂಬೈನಲ್ಲಿ ಪಿಟಿಐಗೆ ತಿಳಿಸಿದ್ದಾರೆ.

SCROLL FOR NEXT