ದೇಶ

ಹೆಲಿಕಾಪ್ಟರ್ ದುರಂತ: 'ಊಹಾಪೋಹ ನಿಲ್ಲಿಸಿ.. ಮೃತರ ಘನತೆ ಕಾಪಾಡಿ'- ಐಎಎಫ್

Srinivasamurthy VN

ನವದೆಹಲಿ: ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ಸ್ (ಸಿಡಿಎಸ್) ಬಿಪಿನ್ ರಾವತ್ ಅವರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಊಹಾಪೋಹಗಳನ್ನು ನಿಲ್ಲಿಸಿ ಎಂದು ಭಾರತೀಯ ವಾಯುಸೇನೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್‌ ದುರಂತದ ಕುರಿತ ಊಹಾಪೋಹಗಳನ್ನು ನಿಲ್ಲಿಸಬೇಕು. ಆ ಮೂಲಕ ಮೃತರ ಘನತೆಯನ್ನು ಕಾಪಾಡುವಂತೆ ಭಾರತೀಯ ವಾಯುಸೇನೆ ಮನವಿ ಮಾಡಿದೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಭಾರತೀಯ ವಾಯುಸೇನೆ, 'ಡಿಸೆಂಬರ್ 8ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದ ಕಾರಣದ ತನಿಖೆಗಾಗಿ ಭಾರತೀಯ ವಾಯುಪಡೆಯು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ರಚಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ದುರಂತಕ್ಕೆ ಕಾರಣವಾದ ಸತ್ಯವನ್ನೂ ಹೊರತರಲಾಗುತ್ತದೆ. ಅಲ್ಲಿಯವರೆಗೆ, ಮಡಿದವರ ಘನತೆಯನ್ನು ಕಾಪಾಡಲು, ಮಾಹಿತಿ ಇಲ್ಲದ ಊಹಾಪೋಹಗಳನ್ನು ತಡೆಯಬೇಕು,’ ಎಂದು ವಾಯುಪಡೆಯ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಶುಕ್ರವಾರ ಟ್ವೀಟ್‌ ಮಾಡಲಾಗಿದೆ.

ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್‌ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸಲಿದೆ. ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.

ಅಂದು ನಡೆದ ದುರಂತದಲ್ಲಿ ಸೇನಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.
 

SCROLL FOR NEXT