ದೇಶ

ಕೆಲ ಹೊತ್ತು ಹ್ಯಾಕ್ ಆಗಿ ಮತ್ತೆ ಸರಿಯಾದ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆ!

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ಟ್ವಿಟ್ಟರ್ ಖಾತೆ ಕೆಲ ಹೊತ್ತು ಹ್ಯಾಕ್ ಆಗಿ ಮತ್ತೆ ಸರಿಯಾದ ಪ್ರಸಂಗ ಭಾನುವಾರ ನಸುಕಿನ ಜಾವ ನಡೆದಿದೆ. ಡಿಸೆಂಬರ್ 11ರ ಮಧ್ಯರಾತ್ರಿ ಕಳೆದು 2.24ರ ಹೊತ್ತಿಗೆ ನರೇಂದ್ರ ಮೋದಿಯವರ ಅಧಿಕೃತ ಖಾತೆಯಿಂದ ಒಂದು ಟ್ವೀಟ್ ಆಗಿತ್ತು.

ಅದರಲ್ಲಿ ದೇಶ, ಬಿಟ್ ಕಾಯಿನ್ ನ್ನು ಕಾನೂನುಬದ್ಧಗೊಳಿಸಿದೆ, ಸರ್ಕಾರವೇ ಅಧಿಕೃತವಾಗಿ 500 ಬಿಟ್ ಕಾಯಿನ್ ಗಳನ್ನು ಖರೀದಿಸಿದ್ದು ದೇಶವಾಸಿಗಳಿಗೆ ಹಂಚಲಾಗುತ್ತದೆ ಎಂದು ಟ್ವೀಟ್ ಮಾಡಲಾಗಿತ್ತು. ಪ್ರಧಾನಿ ಮೋದಿಯವರ ಟ್ವೀಟ್ ಖಾತೆಯಲ್ಲಿ ಪೋಸ್ಟ್ ಆದ ಸೆಕೆಂಡ್ ಗಳಲ್ಲಿಯೇ ಇದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಯಿತು.

ಸ್ವತಃ ಪ್ರಧಾನಿಯವರ ಟ್ವೀಟ್ ಖಾತೆಯಿಂದ ಇದು ಪೋಸ್ಟ್ ಆಗಿದೆ ಎಂದರೆ ಕೇಳಬೇಕೆ ಕೆಲವೇ ನಿಮಿಷಗಳಲ್ಲಿ ಸುದ್ದಿಯಾಯಿತು. ಹಲವರಿಗೆ ಇದರ ಬಗ್ಗೆ ಅನುಮಾನ ವ್ಯಕ್ತವಾಗಿ ಬಹುಶಃ ಹ್ಯಾಕ್ ಆಗಿರಬೇಕು ಎಂದು ಭಾವಿಸಿದರು. ಇನ್ನು ಕೆಲವರು, 500 ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ ಇತ್ತೀಚೆಗೆ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಹಲವು ಅಚಾನಕ್ ಘೋಷಣೆಗಳನ್ನು ಮಾಡಿದ ಪ್ರಧಾನಿಯವರು ಒಂದು ವೇಳೆ ಬಿಟ್ ಕಾಯಿನ್ ನ್ನು ದೇಶದಲ್ಲಿ ಕಾನೂನುಬದ್ಧಗೊಳಿಸಿರಲೂಬಹುದು ಎಂದು ಭಾವಿಸಿದರು.

ಇದಾಗಿ ಒಂದೇ ಗಂಟೆಗಳಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಪ್ರತಿಕ್ರಿಯೆ ನೀಡಿ ಪ್ರಧಾನಿಯವರ ಟ್ವೀಟ್ ಖಾತೆ ಹ್ಯಾಕ್ ಆಗಿತ್ತು, ಈಗ ಸರಿಯಾಗಿದೆ, ಆಗ ಮಾಡಿದ್ದ ಟ್ವೀಟ್ ಗಳೆಲ್ಲ ನಿಜವಲ್ಲ ಎಂದು ಸ್ಪಷ್ಟನೆ ನೀಡಿತು. 

ಕಳೆದ ವರ್ಷ ಪ್ರಧಾನಿಯವರ ಇನ್ನೊಂದು ಟ್ವಿಟ್ಟರ್ ಅಕೌಂಟ್ @narendramodi_in ಕೂಡ ಹ್ಯಾಕ್ ಆಗಿ ಅದರಲ್ಲಿ ಕೋವಿಡ್-19ಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಬಿಟ್ ಕಾಯಿನ್ ದಾನ ಮಾಡಿ ಎಂದು ಹೇಳಲಾಗಿತ್ತು. ಅದರಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕ್ರಿಪ್ಟೊ ಕರೆನ್ಸಿಯನ್ನು ದಾನ ಮಾಡಿ ಎಂದು ಟ್ವೀಟ್ ಮಾಡಲಾಗಿತ್ತು. ಕೊನೆಗೆ ಅದು ಹ್ಯಾಕರ್ ಗಳ ಉಪಟಳ ಎಂದು ಗೊತ್ತಾಯಿತು. 

ಇಂದು ನಸುಕಿನ ಜಾವ ಪ್ರಧಾನಿಯವರ ಟ್ವೀಟ್ ಖಾತೆ ಹ್ಯಾಕ್ ಆಗಿದೆ ಎಂದು ಗೊತ್ತಾದ ಕೂಡಲೇ ಟ್ವಿಟ್ಟರ್ ಸಂಸ್ಥೆಗೆ ಮಾಹಿತಿ ನೀಡಿ ನಂತರ ಸರಿಪಡಿಸಲಾಯಿತು.

SCROLL FOR NEXT