ದೇಶ

ಅವಹೇಳನಕಾರಿ ಹೇಳಿಕೆ: ಶಿವಸೇನಾ ನಾಯಕ ಸಂಜಯ್ ರಾವತ್ ವಿರುದ್ಧ ಎಫ್‍ಐಆರ್ ದಾಖಲು

Lingaraj Badiger

ಮುಂಬೈ: ಟಿವಿ ಸಂದರ್ಶನವೊಂದರಲ್ಲಿ ಬಿಜೆಪಿ ಮಹಿಳಾ ನಾಯಕರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದ ಮೇಲೆ ಶಿವಸೇನಾ ನಾಯಕ ಸಂಜಯ್ ರಾವತ್ ಅವರ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.

ಬಿಜೆಪಿಯವರು ಸಂಜಯ್ ರಾವತ್ ವಿರುದ್ಧ ದೂರು ದಾಖಲಿಸಿದ್ದು, ಬಿಜೆಪಿಯವರ ಈ ನಡೆಯನ್ನು ರಾಜಕೀಯ ಪ್ರೇರಿತ ಎಂದಿರುವ ಸಂಜಯ್ ರಾವತ್, ನನ್ನ ಧ್ವನಿಯನ್ನು ಹತ್ತಿಕಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ನನ್ನ ವಿರುದ್ಧ ರಾಜಕೀಯ ಉದ್ದೇಶದಿಂದ ಎಫ್‍ಐಆರ್ ದಾಖಲಿಸಿದ್ದಾರೆ ಮತ್ತು ನನ್ನ ಧ್ವನಿಯನ್ನು ಹತ್ತಿಕ್ಕಲು ಈ ರೀತಿ ವರ್ತನೆ ತೋರಿದ್ದಾರೆ. ನನ್ನ ವಿರುದ್ಧ ಸಿಬಿಐ, ಐಟಿ, ಇಡಿ ಹೀಗೆ ಯಾವುದೇ ದಾಳವನ್ನು ಬಳಸಲಾಗುವುದಿಲ್ಲ. ನನ್ನ ಪಕ್ಷದ ಮಾನಹಾನಿಗಾಗಿ ಈ ಕುತಂತ್ರ ಹೂಡಲಾಗಿದೆ. ನಾನು ಸಂಸದ, ಇದು ಸರಿಯಲ್ಲ. ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲು ಕೆಲವರನ್ನು ಉತ್ತೇಜಿಸಲಾಗಿದೆ ಎಂದು ದೂರಿದ್ದಾರೆ.

ನಾನು ಸಂದರ್ಶನದಲ್ಲಿ ಬಳಸಿದ ಪದದ ಅರ್ಥ ಹಿಂದಿ ನಿಘಂಟಿನಲ್ಲಿ ಮೂರ್ಖ ಎಂಬ ಅರ್ಥ ಬರುತ್ತದೆ. ಬಿಜೆಪಿ ನಾಯಕರು ಮಹಿಳಾ ನಾಯಕಿಯರ ವಿರುದ್ಧ ಹೆಚ್ಚು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ, ಅವರ ವಿರುದ್ಧ ಎಫ್‍ಐಆರ್ ಯಾಕೆ ದಾಖಲಿಸಲಿಲ್ಲ ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 9ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪ್ತಿ ರಾವತ್ ಭಾರದ್ವಾಜ್ ಅವರು ನೀಡಿದ ದೂರಿನ ಆಧಾರದ ಮೇಲೆ ರಾವತ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

SCROLL FOR NEXT