ದೇಶ

ಲಖಿಂಪುರ್ ಖೇರಿ ಹಿಂಸಾಚಾರ ಕುರಿತು ಎಸ್ಐಟಿ ವರದಿ: ಪ್ರತಿಪಕ್ಷಗಳಿಂದ ತೀವ್ರ ಗದ್ದಲ; ಲೋಕಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

Manjula VN

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದ ಎಸ್‌ಐಟಿ ವರದಿಯ ಕುರಿತು ಪ್ರತಿಪಕ್ಷಗಳು ತೀವ್ರ ಗದ್ದಲ ಸೃಷ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.

ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ಆರೋಪಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುಂತೆ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇಂದು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕರು ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ, ಸರ್ಕಾರದ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಿ ಪ್ರತಿಭಟನೆ ನಡೆಸಲು ಆರಂಭಿಸಿದರು.

ಈ ವೇಳೆ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ ಅವರು, ಪ್ರಶ್ನೋತ್ತರ ಅವಧಿಯನ್ನು ನಡೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಪ್ರಶ್ನೋತ್ತರ ಅವಧಿ ನಡೆಸಲು ಅನುವು ಮಾಡಿಕೊಡದ ಪ್ರತಿಭಟನೆ ನಡೆಸುವುದು ಉತ್ತಮ ನಡವಳಿಕೆಯಲ್ಲ ಎಂದು ಹೇಳಿದರು. ಹಲವು ಬಾರಿ ಮನವಿಗಳ ಬಳಿಕವೂ ವಿರೋಧ ಪಕ್ಷಧ ನಾಯಕರು ಕೇಳದೆ ಪ್ರತಿಭಟನೆ ನಡೆಸಿ ಗದ್ದಲವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ನಿನ್ನೆಯಷ್ಟೇ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ನಾಲ್ವರು ರೈತರು ಹಾಗೂ ಪತ್ರಕರ್ತನ ಹತ್ಯೆ ಪೂರ್ವಯೋಜಿತ ಸಂಚಾಗಿತ್ತು ಎಂದು ಹೇಳಿದೆ.

ಈ ನಡುವೆ 12 ಸದಸ್ಯರ ಅಮಾನತುಗೊಳಿಸಿದ ಕುರಿತು ವಿರೋಧ ಪಕ್ಷಗಳ ನಾಯಕರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಗಿತ್ತು.

ಪ್ರಸ್ತಾಪ ಮಾಡಬೇಕಾದ ವಿಷಯಗಳ ಪಟ್ಟಿಯನ್ನು ಸದನದಲ್ಲಿ ಮಂಡಿಸುತ್ತಿದ್ದಂತೆಯೇ 12 ಸದಸ್ಯರ ಅಮಾನತು ರದ್ದು ಮಾಡುವ ವಿಚಾರವನ್ನು ಪ್ರಸ್ತಾಪಿಸುವಂತೆ ಆಗ್ರಹಿಸಿದರು. ಬಳಿಕ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಶೂನ್ಯ ಅವಧಿಯಲ್ಲಿ ಪ್ರಸ್ತಾಪಿಸುವಂತೆ ಸೂಚಿಸಿದರು.

ಶೂನ್ಯ ಅವಧಿಯಲ್ಲಿ ವಿಚಾರ ಪ್ರಸ್ತಾಪಿಸಿದ ವೇಳೆ ಕೆಲ ಸದಸ್ಯರು ಸುದೀರ್ಘವಾಗಿ ಮಾತನಾಡುತ್ತಿದ್ದದ್ದು ಕಂಡು ಬಂದಿತ್ತು.

"ನೀವು (ವಿಪಕ್ಷ ಸದಸ್ಯರು) ಸದನಕ್ಕೆ ಅವಕಾಶ ನೀಡದಿರಲು ಮತ್ತು ಸದಸ್ಯರ ಹಕ್ಕಿನ ಅವಕಾಶವನ್ನು ಕಸಿದುಕೊಳ್ಳಲು ನಿರ್ಧರಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ವರ್ತನೆಯಿಂದ ಇದು ಸ್ಪಷ್ಟವಾಗುತ್ತಿದೆ. ಎಂದು ಬೇಸರ ವ್ಯಕ್ತಪಡಿಸಿದ ನಾಯ್ಡು ಅವರು, ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

SCROLL FOR NEXT