ದೇಶ

ದೆಹಲಿಯಲ್ಲಿ ಮತ್ತೆ 10 ಓಮಿಕ್ರಾನ್ ಕೇಸುಗಳು ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ

Sumana Upadhyaya

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಮತ್ತೆ 10 ಹೊಸ ಓಮಿಕ್ರಾನ್ ಕೇಸುಗಳು ಪತ್ತೆಯಾಗಿದೆ. ಈ ಮೂಲಕ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 20ಕ್ಕೇರಿದೆ.

ಇವರಲ್ಲಿ 10 ಮಂದಿ ಗುಣಮುಖ ಹೊಂದಿ ಬಿಡುಗಡೆಯಾಗಿದ್ದಾರೆ. 40 ಮಾದರಿಗಳಲ್ಲಿ 10 ಮಂದಿಯ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಅಂತರರಾಷ್ಟ್ರೀಯ ಪ್ರವಾಸ ಮಾಡಿ ಹಲವು ಪ್ರಯಾಣಿಕರು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದು ಇದರಿಂದ ಸೋಂಕಿತರು ಹೆಚ್ಚುತ್ತಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳುತ್ತಾರೆ. 

ಓಮಿಕ್ರಾನ್ ಸೋಂಕು ಇದುವರೆಗೆ ಸಮುದಾಯದಲ್ಲಿ ಹಬ್ಬಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಮೊದಲ ಓಮಿಕ್ರಾನ್ ಕೇಸು ಡಿಸೆಂಬರ್ 5ರಂದು ರಾಂಚಿಯಿಂದ ಬಂದ 37 ವರ್ಷದ ವ್ಯಕ್ತಿಯಲ್ಲಿ ಕಂಡುಬಂದಿತ್ತು. ಅವರು ಮೊನ್ನೆ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಅವರು ತಾಂಜಾನಿಯಾದಿಂದ ದೊಹಕ್ಕೆ ಬಂದು ಅಲ್ಲಿಂದ ದೆಹಲಿಗೆ ಕತಾರ್ ವಿಮಾನದಲ್ಲಿ ಡಿಸೆಂಬರ್ 2ರಂದು ಬಂದಿದ್ದರು. 

ಈ ಮಧ್ಯೆ, ಶಂಕಿತ ಓಮಿಕ್ರಾನ್ ವ್ಯಕ್ತಿಗಳನ್ನು ಪ್ರತ್ಯೇಕಿಸಲು ಮತ್ತು ಚಿಕಿತ್ಸೆ ನೀಡುತ್ತಿರುವ ಲೋಕ ನಾಯಕ ಆಸ್ಪತ್ರೆಯಲ್ಲಿ 40 ಜನರನ್ನು ಪ್ರಸ್ತುತ ವಿಶೇಷ ಸೌಲಭ್ಯಕ್ಕೆ ಒಳಪಡಿಸಲಾಗಿದೆ ಎಂದು ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೊಸ ನಿಯಮಗಳ ಅಡಿಯಲ್ಲಿ, "ಅಪಾಯದಲ್ಲಿರುವ" ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಕಡ್ಡಾಯವಾಗಿದೆ ಮತ್ತು ಫಲಿತಾಂಶಗಳು ಬಂದ ನಂತರವೇ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಕಳುಹಿಸಲಾಗುತ್ತಿದೆ. ಅಲ್ಲದೆ, ಇತರ ದೇಶಗಳಿಂದ ವಿಮಾನಗಳಲ್ಲಿ ಬರುವ ಶೇಕಡಾ 2ರಷ್ಟು ಪ್ರಯಾಣಿಕರನ್ನು ರ್ಯಾಂಡಮ್ ಆಗಿ ಪರೀಕ್ಷಿಸಲಾಗುತ್ತಿದೆ.

SCROLL FOR NEXT