ದೇಶ

ಅಮೃತಸರದ ಸ್ವರ್ಣ ಮಂದಿರದಲ್ಲಿ ಅಪಚಾರವೆಸಗಿದ ಆರೋಪ; ಕೋಪೋದ್ರಿಕ್ತ ಗುಂಪಿನಿಂದ ವ್ಯಕ್ತಿಯ ಮೇಲೆ ಹಲ್ಲೆ, ಹತ್ಯೆ  

Srinivas Rao BV

ಚಂಡೀಗಢ: ಅಮೃತಸರದ ಸ್ವರ್ಣ ಮಂದಿರದಲ್ಲಿ ಅಪಚಾರವೆಸಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಮೇಲೆ ಕೋಪೋದ್ರಿಕ್ತರು ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. 

ನಿತ್ಯ ನಡೆಯುವ ಸಂಜೆಯ ಪ್ರಾರ್ಥನೆಯ ಸಂದರ್ಭದಲ್ಲಿ ಆ ಸ್ಥಳಕ್ಕೆ ಜಿಗಿದು ಬಂದ ವ್ಯಕ್ತಿಯೋರ್ವ ಗುರು ಗ್ರಂಥ ಸಾಹೀಬ್ (ಸಿಖ್ ಧರ್ಮದ ಪವಿತ್ರ ಗ್ರಂಥ) ಬಳಿ ಇರಿಸಲಾಗಿದ್ದ ಖಡ್ಗವನ್ನು ಮುಟ್ಟುವುದಕ್ಕೆ ಯತ್ನಿಸಿದ. ಶುಭ್ರವಾಗಿ ಕ್ಷೌರ ಮಾಡಿಸಿಕೊಂಡಿದ್ದ ಆತ ತಲೆಗೆ ಹಳದಿ ಬಣ್ಣದ ಬಟ್ಟೆ ಕಟ್ಟಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಆತ ಈ ಕೃತ್ಯಕ್ಕೆ ಮುಂದಾಗುತ್ತಿದ್ದಂತೆಯೇ ಕರ್ತವ್ಯನಿರತ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ ಜಿಪಿಸಿ) ಉದ್ಯೋಗಿಗಳು ಆತನನ್ನು ವಶಕ್ಕೆ ಪಡೆದಿದ್ದು ಪ್ರಾರ್ಥನೆ ನಿರ್ವಿಘ್ನವಾಗಿ ನಡೆದಿದೆ. 

ಆತನನ್ನು ವಶಕ್ಕೆ ಪಡೆದ ಎಸ್ ಜಿಪಿಸಿ ಉದ್ಯೋಗಿಗಳು ಕೊಠಡಿಗೆ ಕರೆದೊಯ್ದು ವಿಚಾರಣೆ ವೇಳೆ ಥಳಿಸಿದ್ದಾರೆ. ಥಳಿತದ ತೀವ್ರತೆಗೆ ಆತ ಮೃತಪಟ್ಟಿದ್ದಾನೆ.

ಚಾನಲ್ ಒಂದು ನಿತ್ಯದ ಪ್ರಾರ್ಥನೆಯ ನೇರ ಪ್ರಸಾರ ಕಲ್ಪಿಸುವುದರಿಂದ ಈ ಘಟನೆಯ ದೃಶ್ಯಾವಳಿಗಳು ಪ್ರಸಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣವೇ ಸಾರ್ವಜನಿಕರು ಹಾಗೂ ನಿಹಾಂಗ್ (ಸಿಖ್ ಯೋಧರು) ಸ್ವರ್ಣ ಮಂದಿರಕ್ಕೆ ಧಾವಿಸಿದ್ದಾರೆ. 

ಅಮೃತಸರ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿಯ ಪ್ರಕಾರ, ಆ ವ್ಯಕ್ತಿ ದೈವ ನಿಂದನೆಗೆ ಯತ್ನಿಸಿದ್ದ. ಆದ್ದರಿಂದ ಸಾರ್ವಜನಿಕರು ಆತನನ್ನು ಸಾಯುವ ಮಟ್ಟಿಗೆ ಥಳಿಸಿದ್ದಾರೆ" ಎಂದು ಹೇಳಿದ್ದಾರೆ. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿದ್ದಾರೆ. 

SCROLL FOR NEXT