ದೇಶ

ರೋಹಿಣಿ ಕೋರ್ಟ್ ಸ್ಫೋಟ ಪ್ರಕರಣ: ನೆರೆಯ ವಕೀಲನ ಹತ್ಯೆಗೆ ಯತ್ನಿಸಿದ ಡಿಆರ್ ಡಿಒ ವಿಜ್ಞಾನಿ ಬಂಧನ

Lingaraj Badiger

ನವದೆಹಲಿ: ಈ ತಿಂಗಳ ಆರಂಭದಲ್ಲಿ ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ 47 ವರ್ಷದ ಡಿಆರ್‌ಡಿಒ ವಿಜ್ಞಾನಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ಕೋರ್ಟ್ ರೂಮ್ ನಂ.102 ರಲ್ಲಿ ನಡೆದ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿದ್ದರು.

ಬಂಧಿತ ಆರೋಪಿ ಭರತ್ ಭೂಷಣ್ ಕಟಾರಿಯಾ ಎಂದು ಗುರುತಿಸಲಾಗಿದ್ದು, ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಹಿರಿಯ ವಿಜ್ಞಾನಿ ಎಂದು ಮೂಲಗಳು ತಿಳಿಸಿವೆ.

ಆರೋಪಿಯು ತಮ್ಮ ನೆರೆಯ ವಕೀಲರೊಬ್ಬರೊಂದಿಗೆ ಜಗಳವಾಡಿದ್ದರು. ಹೀಗಾಗಿ ಅವರೇ ಬಾಂಬ್ ತಯಾರಿಸಿ ನ್ಯಾಯಾಲಯದ ಕೊಠಡಿ ಸಂಖ್ಯೆ 102ರಲ್ಲಿ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನ ಪ್ರಕಾರ, ಆರೋಪಿಯು ಘಟನೆ ನಡೆದ ದಿನ ಬೆಳಗ್ಗೆ 9.33ಕ್ಕೆ ಎರಡು ಬ್ಯಾಗ್‌ಗಳೊಂದಿಗೆ ನ್ಯಾಯಾಲಯವನ್ನು ಪ್ರವೇಶಿಸಿದ್ದು, ಅದರಲ್ಲಿ ಒಂದನ್ನು ನ್ಯಾಯಾಲಯದ ಕೊಠಡಿಯೊಳಗೆ ಬಿಟ್ಟು ಹೋಗಿದ್ದಾರೆ.

"ಈ ಇಬ್ಬರೂ ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರು ನೆರೆಹೊರೆಯವರು ಮತ್ತು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮೇಲ್ನೋಟಕ್ಕೆ, ಕಟಾರಿಯಾ ವಕೀಲರ ವಿರುದ್ಧ ದ್ವೇಷ ಹೊಂದಿದ್ದರು ಎಂದು ತೋರುತ್ತದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT