ದೇಶ

ಛತ್ತೀಸ್ ಗಢ: ಎನ್ ಕೌಂಟರ್ ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳ ಹತ್ಯೆ

Nagaraja AB

ದಾಂತೇವಾಡ: ಛತ್ತೀಸ್ ಗಢದ ದಾಂತೇವಾಡದ ಅರಣ್ಯದಲ್ಲಿ ಇಂದು ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಸಿಬ್ಬಂದಿ ಇಬ್ಬರು ಮಹಿಳಾ ಮಾವೋವಾದಿಗಳನ್ನು ಹತ್ಯೆ ಮಾಡಿರುವುದಾಗಿ ದಾಂತೇವಾಡ ಎಸ್ ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.

ದಾಂತೇವಾಡ ಜಿಲ್ಲೆಯ ಅರನ್ ಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗೊಂಡರಾಸ್ ಅರಣ್ಯದ ಬಳಿ ದಾಂತೇವಾಡ ಡಿಆರ್ ಜಿ ಮತ್ತು ಮಾವೋವಾದಿಗಳ ನಡುವೆ ಇಂದು ಬೆಳಗ್ಗೆ 5-30ರ ಸುಮಾರಿನಲ್ಲಿ ಗುಂಡಿನ ಚಕಮಕಿ ನಡೆದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. 

ಶೋಧ ಕಾರ್ಯಾಚರಣೆ ವೇಳೆಯಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ.  ಹತ್ಯೆಗೀಡಾದ ಇಬ್ಬರು ಮಾವೋವಾದಿಗಳಲ್ಲಿ ಒಬ್ಬಳಾದ ಹಿಡ್ಮೆ ಕೊಹ್ರಾಮೆ ಪತ್ತೆಗೆ 5 ಲಕ್ಷ ರೂ  ಮತ್ತು ಇನ್ನೊಬ್ಬ ಮಹಿಳೆ ಪೊಜ್ಜೆ ಪತ್ತೆಗೆ 1 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿತ್ತು.  

ಸ್ಥಳೀಯವಾಗಿ ತಯಾರಿಸಿದ ಮೂರು ರೈಫಲ್‌ಗಳು, ಮದ್ದುಗುಂಡುಗಳು, ಸಂವಹನ ಸಾಧನಗಳು ಮತ್ತು ಸ್ಫೋಟಕ ವಸ್ತುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಅಥವಾ ಗಾಯಗೊಂಡ ಮಾವೋವಾದಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಲ್ಲವ್ ಹೇಳಿದರು.

SCROLL FOR NEXT