ದೇಶ

ಅಮೃತಸರ ಹತ್ಯೆ ಘಟನೆ ಬೆನ್ನಲ್ಲೇ ಗುರುದ್ವಾರದಲ್ಲಿ ಧಾರ್ಮಿಕ ಧ್ವಜ ತೆಗೆಯಲು ಯತ್ನಿಸಿದ ಆರೋಪ: ವ್ಯಕ್ತಿಗೆ ಥಳಿತ

Lingaraj Badiger

ಅಮೃತಸರ: ಸಿಖ್​​ರ ಪವಿತ್ರ ಧಾರ್ಮಿಕ ಕ್ಷೇತ್ರವಾದ ಸ್ವರ್ಣಮಂದಿರ ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಯುವಕನನ್ನು ಹೊಡೆದು ಕೊಂದ ಘಟನೆ ಬೆನ್ನಲ್ಲೇ ಕಪುರ್ತಲಾದಲ್ಲೂ ಇಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.

ಕಪುರ್ತಲಾ ಜಿಲ್ಲೆಯ ಗುರುದ್ವಾರದಲ್ಲಿ ಧಾರ್ಮಿಕ ಧ್ವಜವನ್ನು ತೆಗೆಯಲು ಯತ್ನಿಸಿದ ಆರೋಪದ ಮೇಲೆ ಸಿಖ್ ಭಕ್ತರು ಓರ್ವ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ.

ಕಪುರ್ತಲಾದ ನಿಜಾಂಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಈ ವ್ಯಕ್ತಿ ನಿಜಾಂಪುರದ ಗುರುದ್ವಾರದಲ್ಲಿ ಸಿಖ್ಖರ ಧಾರ್ಮಿಕ ಧ್ವಜವಾದ ನಿಶಾನ್ ಸಾಹಿಬ್​​ನನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತನನ್ನು ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿರುವ ಭಕ್ತರು ಚೆನ್ನಾಗಿ ಥಳಿಸಿದ್ದಾರೆ.

ಪೊಲೀಸರು ಮತ್ತು ಇತರ ಯಾವುದೇ ಏಜೆನ್ಸಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು. ಇಂತಹ ಪ್ರಕರಣಗಳು ನಡೆಯಲು ಪಂಜಾಬ್ ಪೊಲೀಸರು ಮತ್ತು ರಾಜ್ಯ ಸರ್ಕಾರ ಜವಾಬ್ದಾರರಾಗಿರುತ್ತಾರೆ ಎಂದು ಗುರುದ್ವಾರದಿಂದ ಮಾಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶನಿವಾರ ಸಂಜೆ, ಅಮೃತಸರದ ಗೋಲ್ಡನ್ ಟೆಂಪಲ್‌ನೊಳಗೆ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್​​ನನ್ನು ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಲಾಗಿದೆ.

ಅಮೃತಸರ ಪೊಲೀಸರು ಗೋಲ್ಡನ್ ಟೆಂಪಲ್ ಕಾಂಪ್ಲೆಕ್ಸ್ ಮತ್ತು ಸುತ್ತಮುತ್ತ ಕಟ್ಟೆಚ್ಚರ ವಹಿಸಿದ್ದಾರೆ.

ಶನಿವಾರ ಸಂಜೆ ಆರೋಪಿಯನ್ನು ಹೊಡೆದು ಕೊಂದ ಸ್ಥಳದಲ್ಲಿ ಯಾವುದೇ ಗುರುತಿನ ದಾಖಲೆಗಳು ಪತ್ತೆಯಾಗದ ಕಾರಣ ಪೊಲೀಸರು ಈಗ ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್‌ ಮೂಲಕ ತನಿಖೆ ಆರಂಭಿಸಿದ್ದಾರೆ.

SCROLL FOR NEXT