ದೇಶ

ತಮಿಳುನಾಡು: ಭಾರತದ 55 ಮೀನುಗಾರರು, 8 ದೋಣಿಗಳ ವಶಪಡಿಸಿಕೊಂಡ ಶ್ರೀಲಂಕಾ ನೌಕಾಪಡೆ

Srinivasamurthy VN

ರಾಮೇಶ್ವರಂ: ಶ್ರೀಲಂಕಾ ನೌಕಾ ಸಿಬ್ಬಂದಿ ತಮಿಳುನಾಡಿನ 55 ಮೀನುಗಾರರನ್ನು ಮತ್ತು 8 ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಭಾರತ-ಶ್ರೀಲಂಕಾ ಜಲಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ತಮಿಳುನಾಡು ಮೂಲದ ಸುಮಾರು 55 ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆಯ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದು, ಅಲ್ಲದೆ ಮೀನುಗಾರಿಕೆಗೆ ಬಳಸುತ್ತಿದ್ದ 8 ಬೋಟ್ ಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಶ್ರೀಲಂಕಾದಿಂದ 50ಕ್ಕೂ ಹೆಚ್ಚು ಮೀನುಗಾರರು ಮತ್ತು ಅವರ 8 ದೋಣಿಗಳನ್ನು ಬಿಡುಗಡೆ ಮಾಡಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ., ಕೇಂದ್ರ ಸಚಿವರು ತಕ್ಷಣವೇ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಚೆನ್ನೈನಲ್ಲಿ ಅಧಿಕೃತ ಪ್ರಕಟಣೆ ತಿಳಿಸಿದೆ.

43 ಮೀನುಗಾರರನ್ನು ಬಂಧಿಸಿ ರಾಮೇಶ್ವರಂನಿಂದ 6 ದೋಣಿಗಳನ್ನು ವಶಪಡಿಸಿಕೊಂಡ ನಂತರ, ಮಂಡಪಂ ಪ್ರದೇಶದ ಇತರೆ 12 ಮೀನುಗಾರರನ್ನು ಸಹ ಲಂಕಾ ನೌಕಾಸೇನೆ ಬಂಧಿಸಿದೆ. ಮಂಡಪಂ ಮೀನುಗಾರರ 2 ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇಲ್ಲಿನ ಮೀನುಗಾರರ ಸಂಘ ಸೋಮವಾರ (ಡಿಸೆಂಬರ್ 20) ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಅನಿರ್ದಿಷ್ಟಾವಧಿ ಮುಷ್ಕರವನ್ನೂ ಆರಂಭಿಸುವುದಾಗಿ ಘೋಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಮೀನುಗಾರರು ಡಿಸೆಂಬರ್ 18ರಂದು 500ಕ್ಕೂ ಹೆಚ್ಚು ದೋಣಿಗಳಲ್ಲಿ ಇಲ್ಲಿಂದ ಹೊರಟು ಕಚ್ಚಾತೀವು ದ್ವೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅವರಲ್ಲಿ 43 ಮಂದಿಯನ್ನು ಬಂಧಿಸಿ, ಆರು ದೋಣಿಗಳನ್ನು ಭಾನುವಾರ (ಡಿಸೆಂಬರ್ 19) ಮುಂಜಾನೆ ವಶಪಡಿಸಿಕೊಳ್ಳಲಾಗಿದೆ. ಬಂಧನದ ನಂತರ, ಅವರನ್ನು ದ್ವೀಪ ರಾಷ್ಟ್ರದ ಕಂಗೆಸಂತುರೈ ಶಿಬಿರಕ್ಕೆ ಕರೆದೊಯ್ಯಲಾಯಿತು. ಎಂದು ಮೀನುಗಾರರ ಸಂಘದ ನಾಯಕ ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. 

ರಾಮನಾಥಪುರ ಸಂಸದ ಕೆ.ನವಾಸ್ ಕಣಿ ಅವರು ಕೇಂದ್ರ ಸಚಿವರೊಂದಿಗೆ ಮಾತನಾಡಿ ಮೀನುಗಾರರು ಮತ್ತು ಅವರ ದೋಣಿಗಳ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

SCROLL FOR NEXT