ದೇಶ

ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಭಕ್ತಾದಿಗಳ ದರ್ಶನಕ್ಕೆ ಶಬರಿಮಲೆ ದೇವಾಲಯದ ಅನುಮತಿ 

Srinivas Rao BV

ತಿರುವನಂತಪುರಂ: ಕೇರಳ ಸರ್ಕಾರ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯನ್ನು ಪ್ರತಿದಿನ 60,000ಕ್ಕೂ ಹೆಚ್ಚಿನ ಸಂಖ್ಯೆಗೆ ಏರಿಕೆ ಮಾಡಿದೆ. 

ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭಕ್ತರ ಸಂಖ್ಯೆ ಏರಿಕೆ ಮಾಡಲಾಗಿದ್ದರೂ, ವರ್ಚುವಲ್ ಸರತಿ ವ್ಯವಸ್ಥೆ ಜಾರಿಯಲ್ಲಿರುತ್ತದೆ.

ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಭಕ್ತರಿಗೆ ಬೆಳಗ್ಗೆ 7 ರಿಂದ ಮಧ್ಯಾಹ್ನದವರೆಗೆ ನೆಯ್ಯಭಿಷೇಕವನ್ನು ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರ ಕಚೇರಿ ತಿಳಿಸಿದೆ.

ವರದಿಯ ಪ್ರಕಾರ, ಸನ್ನಿಧಾನದಲ್ಲಿ  ಭಕ್ತರಿಗಾಗಿ 500 ಕೊಠಡಿಗಳ ಸೌಲಭ್ಯವನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಆದರೆ ಕೋವಿಡ್-19 ನಿಯಮಗಳಿಂದಾಗಿ ಪ್ರತಿ ಕೊಠಡಿಯಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ.

ಶಬರಿಮಲೆಯಲ್ಲಿ ಕಟ್ಟುನಿಟ್ಟಾದ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ. ಲಸಿಕೆ ಪ್ರಮಾಣಪತ್ರ ಅಥವಾ ಆರ್​ಟಿ-ಪಿಸಿಆರ್​​ನ ನೆಗೆಟಿವ್​ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಕೋವಿಡ್ -19 ಪ್ರೋಟೋಕಾಲ್‌ಗಳ ಪ್ರಕಾರ, ಪ್ರತಿಯೊಂದು ಕೊಠಡಿಗಳಲ್ಲಿ ನೈರ್ಮಲ್ಯೀಕರಣವನ್ನು ನಡೆಸುವಂತೆ ತಿರುವಾಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ಅನ್ನು ಕೇಳಲಾಗಿದೆ.

ಇದಲ್ಲದೆ, ಪಂಬಾದಿಂದ ನೀಲಿಮಲ, ಅಪ್ಪಾಚಿಮೇಡು ಮತ್ತು ಮರಕ್ಕೂಟಂ ಮೂಲಕ ಹಾದುಹೋಗುವ ಸಾಂಪ್ರದಾಯಿಕ ಮಾರ್ಗವನ್ನು ಭಕ್ತರಿಗೆ ತೆರೆಯಲಾಗುತ್ತಿದೆ. ಮತ್ತೊಂದೆಡೆ, ಶಬರಿಮಲೆಯಲ್ಲಿ ಕರ್ತವ್ಯದಲ್ಲಿರುವ ಭಕ್ತರು ಅಥವಾ ಅಧಿಕಾರಿಗಳಲ್ಲಿ ಯಾವುದೇ ಒಮಿಕ್ರಾನ್ ಪ್ರಕರಣಗಳು ಪತ್ತೆಯಾದರೆ, ಎಲ್ಲಾ ಸಡಿಲಿಕೆಗಳನ್ನು ಒಂದೇ ಬಾರಿಗೆ ಹಿಂಪಡೆಯಲಾಗುವುದು ಎಂದು ಕಂದಾಯ (ದೇವಸ್ವಂ) ಇಲಾಖೆಯು ಆದೇಶ ಹೊರಡಿಸಿದೆ.  

SCROLL FOR NEXT