ದೇಶ

ಓಮಿಕ್ರಾನ್ ಹೆಚ್ಚಳ: ಕ್ರಿಸ್‌ಮಸ್, ಹೊಸ ವರ್ಷಕ್ಕೆ ದೆಹಲಿ ಸರ್ಕಾರ ಬ್ರೇಕ್​​

Vishwanath S

ನವದೆಹಲಿ: ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆ ದೆಹಲಿ ಸರ್ಕಾರವು ಕ್ರಿಸ್​​ಮಸ್​​ ಮತ್ತು ಹೊಸ ವರ್ಷದ ಸಮಯದಲ್ಲಿ ಸಾಮೂಹಿಕವಾಗಿ ಸೇರುವುದನ್ನು ನಿಷೇಧಿಸಿದೆ. ಸೋಂಕನ್ನು ನಿಯಂತ್ರಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ್ದಾಗಿರುತ್ತದೆ ಎಂದು ಸರ್ಕಾರ ಹೇಳಿದೆ.

ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ತಮ್ಮ ವ್ಯಾಪ್ತಿಗೆ ಬರುವ ಸಂಪೂರ್ಣ ಪ್ರದೇಶದ ಸಮೀಕ್ಷೆಯನ್ನು ನಡೆಸಬೇಕು. ಕೊರೊನಾ ವೈರಸ್​​ ಮತ್ತು ಅದರ ಒಮಿಕ್ರಾನ್ ರೂಪಾಂತರವನ್ನು ಹರಡುವ ಸ್ಥಳಗಳಾದ ಮಾರುಕಟ್ಟೆಗಳು ಮತ್ತು ಕಿಕ್ಕಿರಿದ ಸ್ಥಳಗಳನ್ನು ಗುರುತಿಸಬೇಕು ಎಂದು ಡಿಡಿಎಂಎ ಆದೇಶದಲ್ಲಿ ತಿಳಿಸಿದೆ.

ಕೋವಿಡ್-19 ಪ್ರಕರಣಗಳಲ್ಲಿನ ಉಲ್ಬಣವನ್ನು ತಪ್ಪಿಸಲು ಕೋವಿಡ್ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ನಿಗಾ ಇರಿಸಲು ಎಲ್ಲಾ ಡಿಎಂಗಳು ಮತ್ತು ಡಿಸಿಪಿಗಳು ಸಾಕಷ್ಟು ಸಂಖ್ಯೆಯಲ್ಲಿ ತಂಡಗಳನ್ನು ನಿಯೋಜಿಸಬೇಕು ಎಂದು ಅದು ಹೇಳಿದೆ.

ದೆಹಲಿಯ ಎನ್‌ಸಿಟಿಯಾದ್ಯಂತ ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದ ಕೂಟಗಳು ಮತ್ತು ಸಭೆಗಳನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಾ ರೆಸ್ಟೋರೆಂಟ್‌ ಮತ್ತು ಬಾರ್‌ಗಳಿಗೆ ಶೇ.50ರಷ್ಟು ಆಸನ ಸಾಮರ್ಥ್ಯದಲ್ಲಿ ಓಪನ್​ ಮಾಡಲು ಅನುಮತಿಸಲಾಗಿದೆ.

ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 213 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಬುಧವಾರ ತೋರಿಸಿವೆ. 65 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮತ್ತು 57 ರೋಗಿಗಳೊಂದಿಗೆ ದೆಹಲಿ ಅಗ್ರಸ್ಥಾನದಲ್ಲಿದೆ. ಇದುವರೆಗೆ 90 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಒಮಿಕ್ರಾನ್ ಡೆಲ್ಟಾಕ್ಕಿಂತ ಕನಿಷ್ಠ 3 ಪಟ್ಟು ಹೆಚ್ಚಾಗಿ ಹರಡುತ್ತಿದೆ. ಆದ್ದರಿಂದ ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಾದ ಮತ್ತು ತ್ವರಿತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

SCROLL FOR NEXT