ದೇಶ

ಕ್ಷಮೆ ಇರಲಿ: ಬಡ ಮಾಲೀಕನಿಗೆ ಕದ್ದ ವಸ್ತುಗಳನ್ನು ಹಿಂದಿರುಗಿಸಿದ ಕಳ್ಳರು!

Vishwanath S

ಲಖನೌ: ಕಳ್ಳರು ತಾವು ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ವಾಪಸ್​​ ನೀಡಿರುವ ಕುತೂಹಲಕಾರಿ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.

ಬಂದಾ ಜಿಲ್ಲೆಯ ಗ್ರಾಮದ ಬಳಿ ವೆಲ್ಡಿಂಗ್ ಶಾಪ್ ಆರಂಭಿಸಲು ದಿನೇಶ್ ತಿವಾರಿ ಎಂಬುವವರು ಸಾಲ ಮಾಡಿ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಿ ತಂದಿಟ್ಟಿದ್ದರು. ಆದರೆ ಈ ಅಂಗಡಿಯ ಬೀಗ ಒಡೆದು ಒಳನುಗ್ಗಿರುವ ಕಳ್ಳರು ವೆಲ್ಡಿಂಗ್ ಯಂತ್ರ, ಕಟ್ಟರ್ ಮತ್ತು ಗ್ಲಾಂಡರ್ ವಸ್ತುಗಳು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಜಿಲ್ಲೆಯ ಚಂದ್ರಾಯಕ್ ಗ್ರಾಮದ ನಿವಾಸಿ ತಿವಾರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೂರು ನೀಡಿದ್ದರು. ತಿವಾರಿ ಅಂಗಡಿಯನ್ನು ಪರಿಶೀಲಿಸಲು ಮತ್ತು ಕದ್ದ ಮಾಲುಗಳಿಗಾಗಿ ಹುಡುಕಾಟವನ್ನು ಪೊಲೀಸರು ಪ್ರಾರಂಭಿಸಿದ್ದರು. ಆದರೆ ಕದ್ದ ಮಾಲು ಸಿಗುವ ಭರವಸೆಯನ್ನೇ ಅವರು ಕಳೆದುಕೊಂಡಿದ್ದರು.

ಈ ಘಟನೆ ಜರುಗಿದ ಮೂರು ದಿನದ ನಂತರ ಗ್ರಾಮದ ನಿವಾಸಿಯೊಬ್ಬರು ಸಮೀಪದ ಹೊಲಗಳಲ್ಲಿ, ವೆಲ್ಡಿಂಗ್ ಯಂತ್ರಗಳು ಮತ್ತು ಇತರ ವಸ್ತುಗಳಂತೆ ಕಾಣುವ ಕೆಲವು ವಸ್ತುಗಳು ಬಿದ್ದಿವೆ ಎಂದು ತಿಳಿಸಿದರು.

ತಿವಾರಿ ಹೊಲಕ್ಕೆ ಧಾವಿಸಿ ನೋಡಿದಾಗ ಅವರ ಅಂಗಡಿಯಲ್ಲಿ ಕದ್ದಿದ್ದೆಲ್ಲವೂ ಅಲ್ಲಿ ಇದ್ದವು. ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಹಗ್ಗದಿಂದ ಕಟ್ಟಲಾಗಿತ್ತು. ಅಲ್ಲದೇ ಅಲ್ಲೇ ಒಂದು ಪತ್ರ ಕೂಡ ಇದ್ದು, ಇದರಲ್ಲಿ ಕಳ್ಳರು ಕದ್ದಿದ್ದಕ್ಕಾಗಿ ತಿವಾರಿಯವರಲ್ಲಿ ಕ್ಷಮೆಯಾಚಿಸಿದ್ದರು. ಅಲ್ಲದೇ ನೀವು ಬಡವನೆಂದು ತಿಳಿದಿದ್ದರೆ ನಾವು ಹೀಗೆ ಮಾಡುತ್ತಿರಲಿಲ್ಲ ಎಂದು ಪತ್ರದಲ್ಲಿ ಕೂಡ ಇತ್ತಂತೆ.

ನಿಮ್ಮ ಅಂಗಡಿಯ ಬಗ್ಗೆ ನಮಗೆ ತಪ್ಪಾಗಿ ಮಾಹಿತಿ ನೀಡಲಾಗಿತ್ತು. ಮಾಲೀಕರು ಶ್ರೀಮಂತರಾಗಿದ್ದು, ಅಲ್ಲಿ ನಮಗೆ ಹಲವು ಬೆಲೆಬಾಳುವ ವಸ್ತುಗಳು ಸಿಗುತ್ತವೆ ಎಂದು ಹೇಳಿ ನಿಮ್ಮ ಅಂಗಡಿಗೆ ನುಗ್ಗಿದ್ದೇವೆ… ಕ್ಷಮಿಸಿ ಎಂದು ಪತ್ರದಲ್ಲಿ ಇತ್ತು.

SCROLL FOR NEXT