ದೇಶ

ನಾಗಾಲ್ಯಾಂಡ್ ನಲ್ಲಿ ಶೀಘ್ರವೇ ಸೇನೆಗೆ ನೀಡಿರುವ ವಿಶೇಷಾಧಿಕಾರ ಭಾಗಶಃ ತೆರವು!?

Srinivas Rao BV

ನವದೆಹಲಿ: ನಾಗಾಲ್ಯಾಂಡ್ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಭಾಗಶಃ ಹಿಂಪಡೆಯುವುದಕ್ಕೆ ಇರುವ ಸಾಧ್ಯತೆ, ಮಾರ್ಗಗಳನ್ನು ಕೇಂದ್ರ ಸರ್ಕಾರ ಅನ್ವೇಷಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಾಗಾಲ್ಯಾಂಡ್, ಅಸ್ಸಾಂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗುರುವಾರ ತಡರಾತ್ರಿ ಸಭೆ ನಡೆದಿದ್ದು ಈ ಬಳಿಕ ಇಂಥದ್ದೊಂದು ಸಾಧ್ಯತೆಯ ಬಗ್ಗೆ ಸುಳುವು ದೊರೆತಿದೆ. 

ನಾಗಾಲ್ಯಾಂಡ್ ನಲ್ಲಿ ಎಫ್ಎಸ್ ಪಿಎ ಭಾಗಶಃ ಹಿಂಪಡೆದರೂ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿ ಆಗಿರಲಿದೆ. 

ಸಭೆಯ ಬಗ್ಗೆ ಮಾಹಿತಿಯುಳ್ಳ ಮೂಲಗಳು ನಾಗಾಲ್ಯಾಂಡ್ ಸಿಎಂ ನಿಫಿಯು ರಿಯೊ, ಡಿಸಿಎಂ ವೈ. ಪ್ಯಾಟನ್, ಮಾಜಿ ಸಿಎಂ ಟಿ ಆರ್ ಜೆಲಿಯಾಂಗ್ ಅವರು ಎಎಫ್ ಎಸ್ ಪಿಎ ಹಿಂಪಡೆಯುವುದರ ಬಗ್ಗೆ ಒಕ್ಕೊರಲ ಆಗ್ರಹ ಹೊಂದಿದ್ದರು. ಆದರೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ತಮ್ಮ ರಾಜ್ಯದ ಪರವಾಗಿ ಬೇರೆಯದ್ದೇ ನಿಲುವು ಹೊಂದಿದ್ದರು ಎಂದು ತಿಳಿದುಬಂದಿದೆ. 

ಎಎಫ್ಎಸ್ ಪಿಎ ಹಿಂಪಡೆಯುವ ಸಂಬಂಧ ರಿಯೋ ಹಾಗೂ ಇನ್ನಿತರರಿಗೆ ಗೃಹ ಸಚಿವರು ಸ್ಪಷ್ಟ ಸಂದೇಶ ರವಾನಿಸಿದ್ದು, ಒಂದು ವೇಳೆ ಎಎಫ್ಎಸ್ ಪಿಎ ಹಿಂಪಡೆಯಬೇಕಾದಲ್ಲಿ ಅದಕ್ಕೆ ಸಂಬಂಧಿಸಿದ ವಿಧಾನಗಳೆಡೆಗೆ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಯ ವಿಷಯದಲ್ಲಿ ರಾಜ್ಯದ ಪೊಲೀಸರೇ ಹೆಚ್ಚಿನ ಹೊಣೆ, ಜವಾಬ್ದಾರಿ ಹೊರಬೇಕಾಗುತ್ತದೆ ಎಂಬ ಅಂಶಗಳನ್ನೂ ಮನದಟ್ಟು ಮಾಡಿದ್ದಾರೆ.

ಅಂತಿನ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಸಭೆಯ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. 

ಎಎಫ್ಎಸ್ ಪಿಎಗೆ ಅನುವು ಮಾಡಿಕೊಡುವ ತೊಂದರೆಗೊಳಗಾದ ಪ್ರದೇಶಗಳ ಅಧಿಸೂಚನೆ ಡಿ.31ರಂದು ನಾಗಾಲ್ಯಾಂಡ್ ನಲ್ಲಿ ಅಂತ್ಯಗೊಳ್ಳಲಿದ್ದು ಇದಕ್ಕೂ ಮುನ್ನ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಒಂದು ವೇಳೆ ಎಎಫ್ಎಸ್ ಪಿಎಯನ್ನು ಹಿಂಪಡೆದರೂ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಸೇನೆಯ ಪಾತ್ರವಿರುವ ರೀತಿಯಲ್ಲಿ ಯುನಿಫೈಡ್ ಕಮಾಂಡ್ ನ್ನು ರಚಿಸುವ ಸಾಧ್ಯತೆ ಇದೆ ಎಂದು ನಾಗಾಲ್ಯಾಂಡ್ ನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT