ದೇಶ

ಪಂಜಾಬ್ ಚುನಾವಣೆ: ಬಿಜೆಪಿ, ಪಂಜಾಬ್ ಲೋಕ ಕಾಂಗ್ರೆಸ್, ಎಸ್‌ಎಡಿಯಿಂದ ಜಂಟಿ ಪ್ರಣಾಳಿಕೆ

Lingaraj Badiger

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ ಎಸ್‌ಎಡಿ(ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಮತ್ತು ಈ ಮೂರು ಪಕ್ಷಗಳು ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿವೆ ಎಂದು ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರು ಸೋಮವಾರ ಹೇಳಿದ್ದಾರೆ.

ಅಮರಿಂದರ್ ಸಿಂಗ್ ಮತ್ತು ರಾಜ್ಯಸಭಾ ಸಂಸದರಾದ ದಿಂಡ್ಸಾ ಇಬ್ಬರೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರನ್ನು ಇಲ್ಲಿನ ಅಮಿತ್ ಶಾ ಅವರ ನಿವಾಸದಲ್ಲಿ ಭೇಟಿಯಾಗಿ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.

ಬಿಜೆಪಿ, ಅಮಿರಿಂದರ್ ಸಿಂಗ್, ಹಾಗೂ ದಿಂಡ್ಸಾ ಅವರ ಪಕ್ಷಗಳು ಜಂಟಿಯಾಗಿ ಮುಂಬರುವ ಪಂಜಾಬ್‌ ವಿಧಾನಸಭಾ ಚುನಾವಣೆ ಎದುರಿಸಲಿವೆ ಎಂದು ಸಭೆಯ ನಂತರ ಶೇಖಾವತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಪ್ರತಿ ಪಕ್ಷದಿಂದ ಇಬ್ಬರು ನಾಯಕರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಲಾಗುವುದು ಎಂದು ಪಂಜಾಬ್‌ ಬಿಜೆಪಿ ಚುನಾವಣಾ ಉಸ್ತುವಾರಿ ಶೇಖಾವತ್ ಹೇಳಿದ್ದಾರೆ.

SCROLL FOR NEXT