ದೇಶ

'ಸೋನಿಯಾ ಮೇಲೆ ಬಿದ್ದ ಪಕ್ಷದ ಧ್ವಜ'; ಭಾರತದ ಶ್ರೀಮಂತ ಪರಂಪರೆ ಅಳಿಸಲು ಅಸಹ್ಯಕರ ಪ್ರಯತ್ನ- ಕಾಂಗ್ರೆಸ್ ಅಧ್ಯಕ್ಷೆ

Lingaraj Badiger

ನವದೆಹಲಿ: ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೇಲೆ ಧ್ವಜ ಬಿದ್ದ ವಿಚಿತ್ರ ಘಟನೆಯೊಂದು ಸೋಮವಾರ ನಡೆದಿದೆ. ಪಕ್ಷದ ಅಧಿನಾಯಕಿ ಆಗಿರುವ ಸೋನಿಯಾ ಅವರು ದಾರವನ್ನು ಎಳೆದ ತಕ್ಷಣ ಧ್ವಜ ಅವರ ಮೇಲೆಯೇ ಬಿದ್ದಿತು.

ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಪಕ್ಷದ ಕಚೇರಿಗೆ ಸೋನಿಯಾ ಗಾಂಧಿ ಆಗಮಿಸಿದ್ದರು. ಈ ವೇಳೆ ಪಕ್ಷದ ಅಧ್ಯಕ್ಷೆ ಧ್ವಜವನ್ನು ಎಳೆಯುವಾಗ ಅಲ್ಲಿ ಒಬ್ಬ ಕಾರ್ಯಕರ್ತನೂ ಇದ್ದು, ಸೋನಿಯಾ ಗಾಂಧಿಯವರಿಗೆ ಸಹಾಯ ಮಾಡಲು ಯತ್ನಿಸಿದ. ಆದರೆ ಧ್ವಜವು ಅವರ ಮೇಲೆ ಬಿದ್ದಿತು. ಈ ಘಟನೆಯಿಂದ ಅಲ್ಲಿದ್ದ ಎಲ್ಲ ಕಾಂಗ್ರೆಸ್ಸಿಗರು ಬೆಚ್ಚಿಬಿದ್ದರು. ಇದಾದ ನಂತರ ಮಹಿಳಾ ಕಾರ್ಯಕರ್ತೆ ಓಡಿ ಬಂದು ಧ್ವಜಾರೋಹಣಕ್ಕೆ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ ಅದು ಸಹ ವ್ಯರ್ಥವಾಯಿಯತು.

ಅಂತಿಮವಾಗಿ ಸೋನಿಯಾ ಗಾಂಧಿ ತಮ್ಮ ಕೈಯಿಂದಲೇ ಪಕ್ಷದ ಧ್ವಜವನ್ನು ಹಾರಿಸಿದರು. ಈ ಸಂಪೂರ್ಣ ಘಟನೆಯ ಸಮಯದಲ್ಲಿ ಹಿರಿಯ ನಾಯಕಿ ಸೋನಿಯಾ ಎಲ್ಲಿಯೂ ವಿಚಲಿತರಾಗಿ ಕಾಣಿಸಲಿಲ್ಲ. ಅವರ ಪ್ರತಿಕ್ರಿಯೆ ತುಂಬಾನೇ ಶಾಂತವಾಗಿತ್ತು.

ಬಳಿಕ ಮಾತನಾಡಿದ ಸೋನಿಯಾ ಗಾಂಧಿ ಅವರು, ಭಾರತದ ಶ್ರೀಮಂತ ಪರಂಪರೆಯನ್ನು ಅಳಿಸಲು ಅಸಹ್ಯಕರ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಪರಂಪರೆಯ ಗಂಗಾ-ಯಮುನಾ ಸಂಸ್ಕೃತಿಯನ್ನು ಅಳಿಸಲು ಪ್ರಯತ್ನಿಸಲಾಗುತ್ತಿದೆ. ದೇಶದ ಸಾಮಾನ್ಯ ನಾಗರಿಕರಿಗೂ ಅಭದ್ರತೆ ಕಾಡುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬದಿಗೊತ್ತಲಾಗುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಮೌನವಾಗಿರಲು ಸಾಧ್ಯವಿಲ್ಲ ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ನಾಶ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.

"ದ್ವೇಷ ಮತ್ತು ಪೂರ್ವಾಗ್ರಹ ಪೀಡಿತ ವಿಭಜಕ ಸಿದ್ಧಾಂತಗಳು ಮತ್ತು ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವನ್ನು ವಹಿಸದಿರುವುದು ಈಗ ನಮ್ಮ ಸಮಾಜದ ಜಾತ್ಯತೀತ ರಚನೆಯ ಮೇಲೆ ಹಾನಿಯನ್ನುಂಟುಮಾಡುತ್ತಿದೆ" ಎಂದು ಸೋನಿಯಾ ಗಾಂಧಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶುಭಾಶಯ ಕೋರಿದ ರಾಹುಲ್
ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನಾವು ಕಾಂಗ್ರೆಸ್ಸಿಗರು – ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ಪಕ್ಷ ಮತ್ತು ಈ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.

SCROLL FOR NEXT