ದೇಶ

ಪ್ರತಿಭಟನೆ ನಡೆಸುತ್ತಿದ್ದ ವೈದ್ಯರನ್ನು ಎಳೆದೊಯ್ದು ಬಂಧಿಸಿದ ದೆಹಲಿ ಪೊಲೀಸರು

Lingaraj Badiger

ನವದೆಹಲಿ: ಕೊರೋನಾ ಎರಡು ಅಲೆಗಳಲ್ಲೂ ಮುಂಚೂಣಿಯಲ್ಲಿದ್ದ ಯುವ ವೈದ್ಯರನ್ನು ಕೋವಿಡ್ ವಾರಿಯರ್ ಎಂದು ಶ್ಲಾಘಿಸಲಾಗಿತ್ತು. ಈಗ ಅದೇ ವಾರಿಯರ್ ಗಳನ್ನು ಪೊಲೀಸರು ಎಳೆದೊಯ್ದು ಬಂಧಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ನೀಟ್ ಪಿಜಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿನ ವಿಳಂಬ ಖಂಡಿಸಿ ವೈದ್ಯರು ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ಸುಪ್ರೀಂ ಕೋರ್ಟ್‌ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವಾಗ ದೆಹಲಿ ಪೊಲೀಸರು ಅವರ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಮಾತನಾಡಿದ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್(ಆರ್‌ಡಿಎ) ಸಫ್ದರ್‌ಜಂಗ್ ಆಸ್ಪತ್ರೆಯ ಪ್ರಧಾನ ಕಾರ್ಯದರ್ಶಿ ಡಾ.ಅನುಜ್ ಅಗರವಾಲ್ ಅವರು, ತಮ್ಮನ್ನು ಸೇರಿದಂತೆ ಸುಮಾರು 200 ವೈದ್ಯರನ್ನು ಬಂಧಿಸಿ ರಾಜೇಂದ್ರ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. 

2,500 ಕ್ಕೂ ಹೆಚ್ಚು ವೈದ್ಯರನ್ನು ಬಂಧಿಸಲಾಗಿದ್ದು, ತಡರಾತ್ರಿ ಅವರನ್ನು ಬಿಡುಗಡೆ ಮಾಡಲಾಗಿದೆ. ಮಂಗಳವಾರ ಸಹ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಪೊಲೀಸರು ವೈದ್ಯರೊಂದಿಗೆ ನಡೆದುಕೊಂಡ ರೀತಿ ನನಗೆ ಆಘಾತ ತಂದಿದೆ. ನಾನು 11 ವರ್ಷಗಳಿಂದ ವೈದ್ಯನಾಗಿದ್ದೇನೆ, ಆದರೆ ಇಂತಹ ಕ್ರೂರ ಕ್ರಮವನ್ನು ಯಾವತ್ತೂ ನೋಡಿರಲಿಲ್ಲ. ಪ್ರತಿಭಟನೆಯ ಸಮಯದಲ್ಲಿ ಗದ್ದಲದ ನಂತರ ಅನೇಕ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ”ಡಾ ಅನುಜ್ ಹೇಳಿದರು. ಪ್ರತಿಭಟನೆಯ ಸಂದರ್ಭದಲ್ಲಿ ಅನೇಕ ವೈದ್ಯರು ತಮ್ಮ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಹಲವಾರು ಮಹಿಳಾ ವೈದ್ಯರನ್ನು ಸಹ ಪುರುಷ ಪೊಲೀಸರು ಎಳೆದೊಯ್ದಿದ್ದಾರೆ. ಹಲವಾರು ಮಹಿಳಾ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂದು ಡಾ ಅನುಜ್ ಆರೋಪಿಸಿದ್ದಾರೆ. ಅಲ್ಲದೆ "ಇದು ಅತ್ಯಂತ ನಾಚಿಕೆಗೇಡಿನ ಘಟನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SCROLL FOR NEXT