ದೇಶ

ದೇಶದಲ್ಲಿ ಒಂದೇ ದಿನ 309 ಹೊಸ ಓಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ಒಟ್ಟಾರೆ ಸಂಖ್ಯೆ 1,270ಕ್ಕೆ ಏರಿಕೆ

Manjula VN

ನವದೆಹಲಿ: ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಆರ್ಭಟ ನಿಧಾನವಾಗಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 309 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 1,270ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಬುಧವಾರ ಭಾರತದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,270ಕ್ಕೇರಿದೆ. ಈ ಪೈಕಿ 374 ಚೇತರಿಸಿಕೊಂಡಿದ್ದು, ಹಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಿದೆ.

ದೇಶದ ಒಟ್ಟಾರೆ ಓಮಿಕ್ರಾನ್ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಇದುವರೆಗೆ ಅತಿ ಹೆಚ್ಚು 450 ಪ್ರಕರಣಗಳು ವರದಿಯಾಗಿದ್ದು, ದೆಹಲಿ (320) ಮತ್ತು ಕೇರಳ (109) ನಂತರದ ಸ್ಥಾನದಲ್ಲಿವೆ.

ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿರುವ ಇತರ ರಾಜ್ಯಗಳೆಂದರೆ ತೆಲಂಗಾಣ 62, ರಾಜಸ್ಥಾನ 69, ಕರ್ನಾಟಕ 34, ತಮಿಳುನಾಡು 46 ಮತ್ತು ಆಂಧ್ರಪ್ರದೇಶ 16 ಪ್ರಕರಣಗಳು ವರದಿಯಾಗಿದೆ.

ಅಂತೆಯೇ ಹರಿಯಾಣ 14, ಒಡಿಶಾ 14, ಪಶ್ಚಿಮ ಬಂಗಾಳ 11, ಮಧ್ಯಪ್ರದೇಶ 9, ಉತ್ತರಾಖಂಡ 4, ಚಂಡೀಗಢ 3, ಜಮ್ಮು ಮತ್ತು ಕಾಶ್ಮೀರ 3, ಅಂಡಮಾನ್ ನಿಕೋಬಾರ್ 2, ಉತ್ತರಪ್ರದೇಶ 2 ಗೋವಾ, ಹಿಮಾಚಲ ಪ್ರದೇಶ, ಲಡಾಖ್, ಮಣಿಪುರ ಮತ್ತು ಪಂಜಾಬ್ ನಲ್ಲಿ ತಲಾ ಒಂದು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

ಏತನ್ಮಧ್ಯೆ, ಭಾರತವು ಕಳೆದ 24 ಗಂಟೆಗಳಲ್ಲಿ 16,764 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದ್ದು ಸಕ್ರಿಯ ಪ್ರಕರಣಗಳು ಪ್ರಸ್ತುತ 91,361ಕ್ಕೇರಿದೆ.

SCROLL FOR NEXT