ದೇಶ

ದಿಶಾ, ಶಂತನು, ನಿಕಿತಾ 'ಟೂಲ್ ಕಿಟ್' ಸಿದ್ದಪಡಿಸಿ, ಗ್ರೇಟಾಗೆ ಕಳುಹಿಸಿದ್ದಾರೆ: ದೆಹಲಿ ಪೊಲೀಸರು

Lingaraj Badiger

ನವದೆಹಲಿ: ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರು ಶಂತನು ಹಾಗೂ ನಿಖಿತಾ ಜಾಕೋಬ್ ಅವರೊಂದಿಗೆ ಸೇರಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್ ಕಿಟ್ ಸಿದ್ದಪಡಿಸಿ ಅದನ್ನು ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ್ದಾರೆ ಎಂದು ಸೋಮವಾರ ದೆಹಲಿ ಪೊಲೀಸರು ಆರೋಪಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ದಿಶಾ ರವಿಯನ್ನು ಬಂಧಿಸಿದ್ದ ದೆಹಲಿ ಪೊಲೀಸರು ಈ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ದಿಶಾ, ಶಂತನು ಹಾಗೂ ನಿಕಿತಾ ಮೂವರು ಸೇರಿ ಟೂಲ್‌ ಕಿಟ್‌ ಅನ್ನು ಸಿದ್ದಪಡಿಸಿದ್ದಾರೆ ಮತ್ತು ಅದನ್ನು ಟೆಲೆಗ್ರಾಂ ಆ್ಯಪ್ ಮೂಲಕ ಗ್ರೇಟಾಗೆ ಕಳುಹಿಸಿದ್ದಾರೆ ಎಂದು ದೆಹಲಿ ಜಂಟಿ ಪೊಲೀಸ್ ಆಯುಕ್ತ(ಸೈಬರ್) ಪ್ರೇಮ್ ನಾಥ್ ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಟೂಲ್ ಕಿಟ್ ಶೇರ್ ಮಾಡಿದ ಶಂತನು ಮತ್ತು ನಿಕಿತಾ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿರುವುದಾಗಿ ದೆಹಲಿ ಪೊಲೀಸರು ಇಂದು ಬೆಳಗ್ಗೆ ಹೇಳಿದ್ದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಸಿದ್ಧಪಡಿಸಿದ ಆರೋಪದ ಮೇಲೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಪ್ರತಿಪಕ್ಷಗಳು, ಹೋರಾಟಗಾರರು, ಲೇಖಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದಿಶಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ದಿಶಾ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹಲವು ನಾಯಕರು ಕಿಡಿ ಕಾರಿದ್ದಾರೆ. #ReleaseDishaRavi #IndiaBeingSilenced ಎಂಬ ಹ್ಯಾಷ್‌ ಟ್ಯಾಗ್‌ ಬಳಸಿ ಹಲವು ನಾಯಕರು ಟ್ವೀಟ್‌ ಮಾಡಿದ್ದು, ಭಾರತವನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SCROLL FOR NEXT