ದೇಶ

ಡೆಲ್ಟಾ ಪ್ಲಸ್ ನಿಂದ ಮರಣ ಪ್ರಮಾಣ ಅಧಿಕ ಎಂಬುದಕ್ಕೆ ಹೆಚ್ಚಿನ ಡಾಟಾ ಇಲ್ಲ: ದೆಹಲಿ ಏಮ್ಸ್ ನಿರ್ದೇಶಕ

Srinivas Rao BV

ನವದೆಹಲಿ: ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ಹೆಚ್ಚು ಪರಿಣಾಮಕಾರಿಯಲ್ಲ ಅಥವಾ ಅದರಿಂದ ಮರಣ ಪ್ರಮಾಣ ಪ್ರಮಾಣ ಕಡಿಮೆ ಇದೆ ಎಂಬುದಕ್ಕೆ ನಮ್ಮ ಬಳಿ ಹೆಚ್ಚಿನ ಡಾಟಾ ಇಲ್ಲ ಎಂದು ದೆಹಲಿ ಏಮ್ಸ್ ನ ನಿರ್ದೇಶಕ ಡಾ. ರಣ್ದೀಪ್ ಗುಲೇರಿಯಾ ಹೇಳಿದ್ದಾರೆ. 

ಕೋವಿಡ್-19 ಗೆ ಸಂಬಂಧಿಸಿದಂತೆ ಸರಿಯಾದ ರೀತಿಯ ನಡಾವಳಿಕೆಯನ್ನು ಜನತೆ ಪಾಲಿಸಿದಲ್ಲಿ ಹಾಗೂ ಕೋವಿಡ್-19 ಲಸಿಕೆ ಪಡೆದುಕೊಂಡಲ್ಲಿ ಅಂತಹ ವ್ಯಕ್ತಿಗಳು ಯಾವುದೇ ರೂಪಾಂತರಿಯಿಂದಲೂ ಸುರಕ್ಷಿತವಾಗಿರಬಲ್ಲರು ಎಂದು ರಣ್ ದೀಪ್ ಗುಲೇರಿಯಾ ಸಲಹೆ ನೀಡಿದ್ದಾರೆ. 

ಡೆಲ್ಟಾ ಹೆಚ್ಚು ಸೋಂಕು ಉಂಟು ಮಾಡಬಲ್ಲದು ಎಂಬುದಕ್ಕಾಗಲೀ, ಅದರಿಂದ ಹೆಚ್ಚು ಸಾವು ಸಂಭವಿಸುತ್ತದೆ ಎಂಬುದಕ್ಕಾಗಲೀ, ಅಥವಾ ರೋಗನಿರೋಧಕ ಶಕ್ತಿಯನ್ನೂ ಮೀರಿ ಸೋಂಕು ವ್ಯಾಪಿಸುತ್ತದೆ ಎಂಬುದಕ್ಕಾಗಲೀ ಈವರೆಗೂ ಹೆಚ್ಚಿನ ಡಾಟಾ ಲಭ್ಯವಿಲ್ಲ. ಆದರೆ ಕೋವಿಡ್-19 ಬಾರದಂತೆ ಎಚ್ಚರಿಕೆ ವಹಿಸಬಲ್ಲ ನಡಾವಳಿಕೆಯನ್ನು ಜನ ಪಾಲಿಸಿದರೆ ಯಾವುದೇ ರೂಪಾಂತರಿಗಳಿಂದಲೂ ಸುರಕ್ಷಿತವಾಗಿರಬಹುದು ಎಂದು ಗುಲೇರಿಯಾ ಎಎನ್ಐಗೆ ತಿಳಿಸಿದ್ದಾರೆ. 

ವೈದ್ಯರ ದಿನಾಚರಣೆ ಅಂಗವಾಗಿ ಏಮ್ಸ್ ನಿರ್ದೇಶಕರು ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಜೀವ ಕಳೆದುಕೊಂಡ ಆರೋಗ್ಯ ಕಾರ್ಯಕರ್ತರನ್ನು ಸ್ಮರಿಸಿದ್ದಾರೆ. 

ವೈದ್ಯರು ಒಂದು ವರ್ಷದಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ಜೀವ ಕಳೆದುಕೊಂಡ ವ್ಯಕ್ತಿಗಳನ್ನು ಸ್ಮರಿಸಬೇಕು, ಅಂತೆಯೇ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗದಂತೆ ಗಮನ ಹರಿಸಬೇಕು" ಎಂದು  ಗುಲೇರಿಯಾ ಕರೆ ನೀಡಿದ್ದಾರೆ. ಇದೇ ವೇಳೆ ವೈದ್ಯರ ಮೇಲೆ ಹಿಂಸಾಚಾರ ಹೆಚ್ಚುತ್ತಿರುವುದರ ಬಗ್ಗೆಯೂ ಡಾ.ಗುಲೇರಿಯಾ ಧ್ವನಿ ಎತ್ತಿದ್ದು, "ಈ ರೀತಿಯ ಘಟನೆಗಳು ವೈದ್ಯ ಸಮೂಹದ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಿದೆ" ಎಂದಿದ್ದಾರೆ. 

SCROLL FOR NEXT