ದೇಶ

ಛತ್ತೀಸ್‌ಗಢ: ಕೊರೋನಾ ನಿಯಮ ಉಲ್ಲಂಘನೆ, ಮಂಟಪದ ಮಾಲೀಕ, ವಧು-ವರನ ಪೋಷಕರಿಗೆ 9.50 ಲಕ್ಷ ರೂ. ದಂಡ!

Vishwanath S

ರಾಯ್‌ಪುರ: ಕೊರೋನಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕೆ ಮದುವೆ ಮಂಟಪ ಮಾಲೀಕರು, ವಧುವಿನ ಪೋಷಕರು, ನವವರನಿಗೆ ಛತ್ತೀಸ್‌ಗಢ ಸುರ್ಗುಜಾ ಜಿಲ್ಲೆಯ ಆಡಳಿತವು ಬರೋಬ್ಬರಿ 9.50 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮದುವೆಗೆ ಹೆಚ್ಚು ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸುರ್ಗುಜಾ ಕಲೆಕ್ಟರ್ ಸಂಜೀವ್ ಜಾ ಅವರ ನಿರ್ದೇಶನದ ಮೇರೆಗೆ ಜುಲೈ 2ರಂದು ನಗರದ ಚೈರಸಿಯಾ ಮದುವೆ ಮಂಟಪದಲ್ಲಿ ನಡೆದ ವಿವಾಹ ಸಮಾರಂಭದ ಬಗ್ಗೆ ತನಿಖೆ ನಡೆಸಲಾಗಿದ್ದು, 1,000ಕ್ಕೂ ಹೆಚ್ಚು ಜನರು ಹಾಜರಿದ್ದರು ಎಂದು ತಿಳಿದುಬಂದಿದೆ ಎಂದು ಅಂಬಿಕಾಪುರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರದೀಪ್ ಸಾಹು ತಿಳಿಸಿದ್ದಾರೆ. 

ಕೊರೋನಾ ಮಾರ್ಗಸೂಚಿಯಲ್ಲಿ ಮದುವೆಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ಎಸ್‌ಡಿಎಂ ತಿಳಿಸಿದೆ.

ಸ್ಥಳದ ಮಾಲೀಕ ವೀರೇಂದ್ರ ಚೈರಾಸಿಯಾಗೆ 4.75 ಲಕ್ಷ ರೂ., ವರನ ತಂದೆ ಸರೋಜ್ ಸಾಹು ಮತ್ತು ವಧುವಿನ ತಂದೆ ಪ್ರಕಾಶ್ ಸಾಹು ಅವರಿಗೆ ತಲಾ 2.37 ಲಕ್ಷ ದಂಡ ವಿಧಿಸಲಾಯಿತು. ದಂಡವನ್ನು ಅಂಬಿಕಾಪುರ ಪುರಸಭೆಗೆ ಜಮಾ ಮಾಡಲು ತಿಳಿಸಲಾಗಿದೆ. ಅಲ್ಲದೆ ವಿವಾಹ ಮಂಟಪಕ್ಕೆ ಸೀಜ್ ಮಾಡಲಾಗಿದೆ ಎಂದು ಸಾಹು ಮಾಹಿತಿ ನೀಡಿದರು.

SCROLL FOR NEXT