ದೇಶ

ಕೇಂದ್ರ ಸಚಿವ ಸಂಪುಟ ವಿಸ್ತರಣೆ ವದಂತಿ: ಸಂಪುಟದ ಹಿರಿಯ ಸಚಿವರುಗಳ ಜೊತೆಗಿನ ಪ್ರಧಾನಿ ಮೋದಿ ಸಭೆ ರದ್ದು 

Sumana Upadhyaya

ನವದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿರುವ ವದಂತಿಗಳ ಮಧ್ಯೆ ಮಂಗಳವಾರ ಸಂಜೆ 5 ಗಂಟೆಗೆ ಹಿರಿಯ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಭೆ ಕೊನೆ ಕ್ಷಣದಲ್ಲಿ ರದ್ದುಗೊಂಡಿದೆ.

ಸಚಿವರ ಕಾರ್ಯದಕ್ಷತೆ ಮತ್ತು ಭವಿಷ್ಯದ ಯೋಜನೆಗಳ ಪ್ರಸ್ತಾವನೆಗಳ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಲ್ಹಾದ್ ಜೋಷಿ, ಪಿಯೂಷ್ ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು.

ನಿನ್ನೆ ಪ್ರಧಾನಿ ಮೋದಿ ಅವರು ಅಮಿತ್ ಶಾ ಹಾಗೂ ಬಿಜೆಪಿ ಪ್ರಧಾನ ಸಂಘಟನಾ ಕಾರ್ಯದರ್ಶಿ  ಬಿ ಎಲ್ ಸಂತೋಷ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಜೂನ್ 20ರಿಂದಲೂ ಪ್ರಧಾನಿ ಮೋದಿ, ವಿವಿಧ ಸಚಿವಾಲಯಗಳ ಕಾರ್ಯವೈಖರಿ, ಪ್ರದರ್ಶನಗಳ ಪರಾಮರ್ಶನಾ ಸಭೆಗಳನ್ನು ನಡೆಸುತ್ತಾ ಬಂದಿದ್ದಾರೆ. ಸಂಪುಟ ವಿಸ್ತರಣೆಗೆ ಈಗಾಗಲೇ ಪೂರ್ವಭಾವಿ ಸಿದ್ದತೆಗಳು ಮುಗಿದಿವೆ.

ಕೇಂದ್ರದಲ್ಲಿ ಹಲವು ಸಚಿವ ಹುದ್ದೆಗಳು ಖಾಲಿಯಿದ್ದು ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇದೆ. ಇನ್ನೆರಡು ದಿನ ಕಳೆದು ಸಭೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

SCROLL FOR NEXT