ದೇಶ

ಉತ್ತರ ಭಾರತದಲ್ಲಿ ಸಿಡಿಲಿನ ಅಬ್ಬರಕ್ಕೆ 75 ಮಂದಿ ಸಾವು, ಕೇಂದ್ರ, ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ

Srinivasamurthy VN

ನವದೆಹಲಿ: ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ ಸಿಡಿಲು ಬಡಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

ಉತ್ತರ ಪ್ರದೇಶ ಮತ್ತು ರಾಜಸ್ತಾನ, ಮಧ್ಯ ಪ್ರದೇಶ ರಾಜ್ಯಗಳಲ್ಲಿ ಬಾರಿ ಮಳೆ, ಗುಡುಗು ಹಾಗು ಸಿಡಿಲಿಗೆ ಕನಿಷ್ಠ 75 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಕನಿಷ್ಠ 41 ಮಂದಿ ಸಾವನ್ನಪ್ಪಿದ್ದು, ರಾಜಸ್ತಾನದ ಹಲವೆಡೆ ಸಿಡಿಲು ಬಡಿದು 20 ಮತ್ತು ಮಧ್ಯ ಪ್ರದೇಶದಲ್ಲಿ 7  ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಮೃತಪಟ್ಟವರ ಪೈಕಿ ರಾಜಸ್ತಾನದಲ್ಲಿ ನಾಲ್ಕು ಮಕ್ಕಳು ಸೇರಿದ್ದು, 12 ಕ್ಕೂ ಹೆಚ್ಚು ಮೇಕೆಗಳೂ ಕೂಡ ಸಾವನ್ನಪ್ಪಿವೆ ಎನ್ನಲಾಗಿದೆ. 

ಪ್ರಧಾನಿ ಮೋದಿ ಸಂತಾಪ, ತಲಾ 2 ಲಕ್ಷ ರೂ ಪರಿಹಾರ
ಇದೇ ವೇಳೆ ಸಿಡಿಲು ಬಡಿತದಿಂದ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಕಾರ್ಯಾಚರಣೆ
ಇದೇ ವೇಳೆ ಜೈಪುರದ ವಾಚ್ ಟವರ್‌ನಲ್ಲಿ ಸುಮಾರು 35 ರಿಂದ 40 ಜನರಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಡಿದ ಸಿಡಿಲಿಗೆ 16 ಮಂದಿ ಬಲಿಯಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನಾಗರಿಕ ರಕ್ಷಣಾ ಪಡೆ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರ  ತಂಡ ಇಡೀ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ರಾಹುಲ್ ಪ್ರಕಾಶ್ ಅವರು ಮಾತನಾಡಿ, ಈವರೆಗೆ 11 ಜನರ ಮೃತದೇಹ ಹೊರ ತೆಗೆಯಲಾಗಿದ್ದು, 15 ಮಂದಿ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈಗಾಗಲೇ ಮೂರು ಬಾರಿ ಈ  ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದ್ದೇವೆ. ಬೆಳಗ್ಗೆ ಡ್ರೋನ್ ಮೂಲಕ ಶೋಧ ಕಾರ್ಯ ನಡೆಸಲಾಗುವುದು. ಮೃತರಲ್ಲಿ ಹೆಚ್ಚಿನವರು ಜೈಪುರ ಮೂಲದವರು. ಸುಮಾರು 3 ಸಾವಿರ ಮೆಟ್ಟಿಲುಗಳಿರುವ ವಾಚ್ ಟವರ್‌ನಲ್ಲಿ ಕಾರ್ಯಾಚರಣೆ ನಡೆಸುವುದು ರಕ್ಷಣಾ ಸಿಬ್ಬಂದಿಗೆ ಭಾರಿ ಕಷ್ಟದ ಕೆಲಸವಾಗಿದೆ.  ಮೃತದೇಹಗಳನ್ನು ಕೆಳಗಿಳಿಸಲು ಸಿಬ್ಬಂದಿ ಭಾರಿ ಕಷ್ಟಪಡಬೇಕಾಯಿತು. ಮೃತರು ಮತ್ತು ಗಾಯಗೊಂಡವರನ್ನು ಹೆಗಲ ಮೇಲೆ ಹೊತ್ತು ಕೆಳಗಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ತಲಾ ೫ ಲಕ್ಷ ಪರಿಹಾರ: ಸಿಎಂ ಗೆಹ್ಲೋಟ್
ರಾಜಸ್ತಾನದಲ್ಲಿ ಮಳೆ ಮತ್ತು ಸಿಡಿಲಿನಿಂದ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರಂತಕ್ಕೆ ಮುಖ್ಯ ಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ಸೂಚಿಸಿದ್ದು, ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಮಾಜಿ ಮುಖ್ಯಮಂತ್ರಿ  ವಸುಂಧರಾ ರಾಜೆ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಅಂತೆಯೇ ಇತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಮೃತ ಹಾಗೂ ನೊಂದವರ ಕುಟುಂಟಕ್ಕೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

SCROLL FOR NEXT