ದೇಶ

ತಮಿಳುನಾಡಿನ ಎನ್ಇಇಟಿ ಸಮಿತಿಯ ವಿರುದ್ಧದ ಬಿಜೆಪಿ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

Srinivas Rao BV

ಚೆನ್ನೈ: ಎನ್ಇಇಟಿ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ)ಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವುದಕ್ಕೆ ತಮಿಳುನಾಡು ಸರ್ಕಾರ ರಚಿಸಿದ್ದ ಸಮಿತಿಯನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. 

ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯುವುದಕ್ಕೆ ನೀಟ್ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. 

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮೇಲೆ ನೀಟ್ ಪರೀಕ್ಷೆ ಬೀರಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ ಸಮಿತಿಯನ್ನು ರಚಿಸಲಾಗಿತ್ತು. 

ಆದರೆ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕರು ನಾಗರಾಜನ್ ಕೋರ್ಟ್ ಮೆಟ್ಟಿಲೇರಿದ್ದರು. 

ಹೈಕೋರ್ಟ್ ನ ಮೊದಲ ಪೀಠವಾಗಿರುವ ಮುಖ್ಯನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಹಾಗೂ ನ್ಯಾ. ಸೇಂತಿಲ್ ಕುಮಾರ್ ರಾಮಮೂರ್ತಿ, ಸಮಿತಿಯ ರಚನೆ ಯಾವುದೇ ದೃಷ್ಟಿಯಿಂದಲೂ, ಊಹೆಗಳಿಂದಲೂ ಸುಪ್ರೀಂಕೋರ್ಟ್ ನ ಆದೇಶ ಅಥವಾ ಕೇಂದ್ರ ಸರ್ಕಾರದ ಅಧಿಕಾರಗಳಿಗೆ ವಿರುದ್ಧವಾಗಿಲ್ಲ. ಚುನಾಯಿತ ಸರ್ಕಾರವನ್ನು ಎನ್ ಇಇಟಿ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವುದರಿಂದ ಯಾವುದೂ ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

SCROLL FOR NEXT