ದೇಶ

ಸಾಮಾಜಿಕ ಜಾಲತಾಣದಲ್ಲಿನ ಪ್ರತಿಭಟನೆಗೆ ಹೆದರಿ ಅಂತರ್ಧರ್ಮೀಯ ವಿವಾಹ ರದ್ದು!

Srinivas Rao BV

ಅಂತರ್ಧರ್ಮೀಯ ವಿವಾಹವನ್ನು ಖಂಡಿಸಿ ಹಿಂದೂ ಸಮುದಾಯದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮದುವೆ ರದ್ದಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 

ಮಹಾರಾಷ್ಟ್ರದ ನಾಶಿಕ್ ನಲ್ಲಿ ಈ ಘಟನೆ ವರದಿಯಾಗಿದ್ದು, ಮುಸ್ಲಿಂ ವ್ಯಕ್ತಿಯೊಂದಿಗೆ 28 ವರ್ಷದ ಮಹಿಳೆಯ ವಿವಾಹವನ್ನು ರದ್ದುಗೊಳಿಸಲಾಗಿದೆ. ಸಮುದಾಯದ ಸಂಘಟನೆಗೆ ವಧುವಿನ ತಂದೆ, ಚಿನ್ನಾಭರಣ ವ್ಯಾಪಾರಿ, ಪತ್ರ ಬರೆದಿದ್ದು "ಜು.18 ರಂದು ನಡೆಸಲು ಉದ್ದೇಶಿಸಿದ್ದ ವಿವಾಹವನ್ನು ಈಗಿನ ಪರಿಸ್ಥಿತಿಯಲ್ಲಿ ರದ್ದುಪಡಿಸಲಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ್ದಾರೆ.

ಅಂತರ್ಧರ್ಮೀಯ ವಿವಾಹದ ಲಗ್ನಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲೇ ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ತಮ್ಮ ಮಗಳು ಆ ವ್ಯಕ್ತಿಯೊಂದಿಗೆ ಮೇ ತಿಂಗಳಲ್ಲಿ ಕಾನೂನು ರೀತಿಯಲ್ಲಿ ವಿವಾಹವಾಗಿದ್ದಾರೆ (ರಿಜಿಸ್ಟರ್ಡ್ ಮ್ಯಾರೇಜ್)

ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರಿಬ್ಬರು ಒಟ್ಟಿಗೆ ಇರುತ್ತಾರೆ ಎಂದು ಹೇಳು ಸಾಧ್ಯವಿಲ್ಲ ಎಂದು ಹೇಳಿರುವ ಮಹಿಳೆಯ ತಂದೆ, ತಮ್ಮ ಮಗಳು ಸದ್ಯಕ್ಕೆ ತಮ್ಮೊಂದಿಗೇ ಇದ್ದಾಳೆ ಎಂದೂ ಸ್ಪಷ್ಟನೆ ನೀಡಿದ್ದಾರೆ.

ಹಿಂದೂ ಸಂಪ್ರದಾಯದ ಪ್ರಕಾರ ಮಹಿಳೆ ಜು.18 ರಂದು ವಿವಾಹವಾಗಬೇಕಿತ್ತು. ಮಹಿಳೆಯ ಸಮುದಾಯದ ಓರ್ವ ವ್ಯಕ್ತಿ ಈ ಬಗ್ಗೆ ಮಾಹಿತಿ ನೀಡಿದ್ದು, ಹಿಂದೂ ಯುವತಿಯನ್ನು ವಿವಾಹವಾಗಬೇಕಿದ್ದ ವ್ಯಕ್ತಿ ಆಕೆಗೆ ಕೆಲವು ವರ್ಷಗಳ ಹಿಂದೆ ಖಾಸಗಿ ಬೋಧಕನಾಗಿದ್ದರು. ಅವರ ಪರಿಚಯ ಹೀಗೆ ಆಯಿತು ಎಂದು ಹೇಳಿದ್ದಾರೆ.

SCROLL FOR NEXT