ದೇಶ

ಗಿರಿಧಾಮ, ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಸೇರುವುದು ಆತಂಕ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಗಿರಿಧಾಮಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಬೃಹತ್ ಸಂಖ್ಯೆಯಲ್ಲಿ ಸೇರುತ್ತಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಸ್ಕ್ ಹಾಕಿಕೊಳ್ಳದೆ ಓಡಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ಕೊರೋನಾ ಮೂರನೇ ಅಲೆಯನ್ನು ತಡೆಯಲು ಲಸಿಕೆ ಕಾರ್ಯಕ್ರಮವನ್ನು ತ್ವರಿತಗೊಳಿಸಬೇಕು ಎಂದು ಹೇಳಿದ್ದಾರೆ.

ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಮುಖ್ಯಮಂತ್ರಿಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮುಂತಾದವರು ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದರು.

ಕೊರೋನಾ ಮೂರನೇ ಅಲೆ ಏಳುವುದನ್ನು ತಡೆಯಬೇಕೆಂದರೆ ಜನರು ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸಲೇಬೇಕು. ಕೋವಿಡ್ ನಿಂದಾಗಿ ವ್ಯಾಪಾರ-ವಹಿವಾಟು ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ ಹೌದು. ಆದರೆ ಇಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಮಾರುಕಟ್ಟೆಗಳಲ್ಲಿ, ಗಿರಿಧಾಮಗಳಲ್ಲಿ ಜನರು ಬೃಹತ್ ಸಂಖ್ಯೆಯಲ್ಲಿ ಸೇರಿ ಕೊರೋನಾ ನಿಯಮ ಗಾಳಿಗೆ ತೂರುವುದು ಸರಿಯಲ್ಲ, ದೇಶದ ನಾಗರಿಕರೆಲ್ಲರೂ ಒಟ್ಟು ಸೇರಿ ಕೊರೋನಾ ಮೂರನೇ ಅಲೆಯನ್ನು ತಡೆಯಬೇಕು ಎಂದಿದ್ದಾರೆ.

ಕೊರೋನಾದ ಪ್ರತಿ ರೂಪಾಂತರಿಯ ಮೇಲೆ ಜನರು ಒಂದು ಕಣ್ಣಿಟ್ಟರಬೇಕು, ರೂಪಾಂತರಿಗಳ ನಂತರ ವೈರಸ್ ಎಷ್ಟು ತೊಂದರೆಗೊಳಗಾಗಬಹುದು ಎಂದು ತಜ್ಞರು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ, ಆದರೆ ಕ್ರಿಯಾತ್ಮಕ ಪರಿಸ್ಥಿತಿಯಲ್ಲಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯು ಬಹಳ ಮುಖ್ಯವಾಗಿದೆ.ಪರೀಕ್ಷೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸುಧಾರಿಸುವ ಮೂಲಕ ನಾವು ಮುಂದುವರಿಯಬೇಕಾಗಿದೆ. ಇದಕ್ಕಾಗಿ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ 23 ಸಾವಿರ ಕೋಟಿ ರೂಪಾಯಿಗಳ ಹೊಸ ಪ್ಯಾಕೇಜ್ ಅನ್ನು ಸಹ ಅನುಮೋದಿಸಿದೆ. ಈಶಾನ್ಯದ ಪ್ರತಿಯೊಂದು ರಾಜ್ಯವು ಈ ಪ್ಯಾಕೇಜ್‌ನಿಂದ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಸಹಾಯ ಪಡೆಯಬಹುದು ಎಂದರು.

ಈಶಾನ್ಯ ಭಾರತದ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಪರಿಸ್ಥಿತಿ ಆತಂಕಕಾರಿಯಾಗಿದೆ. ವೈರಸ್ ಮತ್ತಷ್ಟು ಹರಡದಂತೆ ತಡೆಯಲು ಮುಖ್ಯಮಂತ್ರಿಗಳು ಎಚ್ಚರಿಕೆಯಿಂದಿರಬೇಕು, ಪರೀಕ್ಷೆ, ಲಸಿಕೆ ನೀಡಿಕೆಯನ್ನು ತ್ವರಿತಗೊಳಿಸಬೇಕು ಎಂದರು.

ಸೂಕ್ಷ್ಮ ಮಟ್ಟದಲ್ಲಿ ವೈರಸ್ ನ್ನು ತಪಾಸಣೆ ಮಾಡುವ ಅಗತ್ಯವಿದೆ ಎಂದ ಪ್ರಧಾನಿ ಸೂಕ್ಷ್ಮ ಕಂಟೈನ್ ಮೆಂಟ್ ವಲಯಗಳಿಗೆ ಒತ್ತು ನೀಡಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.

SCROLL FOR NEXT