ದೇಶ

ಅನುಪಯುಕ್ತ ಹೇಳಿಕೆ, ಜನರಲ್ಲಿ ಆತಂಕ ಮೂಡಿಸುವ ಕೆಲಸ: ಲಸಿಕೆ ಕೊರತೆ ಆರೋಪ ಬಗ್ಗೆ ಆರೋಗ್ಯ ಸಚಿವ ಮಾಂಡವಿಯ ಸ್ಪಷ್ಟನೆ

Srinivas Rao BV

ನವದೆಹಲಿ: ದೇಶದಲ್ಲಿ ಲಸಿಕೆಯ ಕೊರತೆಯ ನಿರಾಕರಣೆಯನ್ನು ನೂತನ ಆರೋಗ್ಯ ಸಚಿವರೂ ಮುಂದುವರೆಸಿದ್ದಾರೆ. ಲಸಿಕೆ ಕೊರತೆ ಇರುವುದನ್ನು ಅಲ್ಲಗಳೆದಿರುವ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ, ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಜುಲೈ ತಿಂಗಳಲ್ಲಿ ಲಸಿಕೆ ಲಭ್ಯತೆಯನ್ನು 13.50 ಕೋಟಿಗೆ ಏರಿಕೆ ಮಾಡಲಾಗಿದೆ.  ಜೂನ್ ನಲ್ಲಿ ರಾಜ್ಯ ಸರ್ಕಾರಗಳಿಗೆ 11.46 ಕೋಟಿಯಷ್ಟು ಲಸಿಕೆಗಳನ್ನು ಪೂರೈಕೆ ಮಾಡಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಂಡವೀಯ, ಜನರಲ್ಲಿ ಭೀತಿ ಮೂಡಿಸುವುದಕ್ಕಾಗಿ ಅನುಪಯುಕ್ತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆ ಲಭ್ಯತೆ ಕುರಿತು ಹಲವು ಹೇಳಿಕೆಗಳು ಹಾಗೂ ಹಲವು ರಾಜ್ಯ ಸರ್ಕಾರಗಳ ಪತ್ರಗಳ ಮೂಲಕ ಮಾಹಿತಿ ಪಡೆದಿದ್ದೇನೆ. ವಾಸ್ತವದ ವಿಶ್ಲೇಷಣೆಯ ಮೂಲಕ ಪರಿಸ್ಥಿತಿಯನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ" ಎಂದಿದ್ದಾರೆ.

ಜೂ.19 ರಂದೇ ಜುಲೈ ನಲ್ಲಿ ರಾಜ್ಯಗಳಿಗೆ  ಲಭ್ಯವಿರುವ ಲಸಿಕೆಯ ಪ್ರಮಾಣದ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಮೂಲಕ ರಾಜ್ಯ ಸರ್ಕಾರಗಳಿಗೆ ಯಾವಾಗ ಎಷ್ಟು ಪ್ರಮಾಣದ ಲಸಿಕೆಗಳು ಲಭ್ಯವಿರಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ರವಾನೆ ಮಾಡಲಾಗಿತ್ತು" ಎಂದು ಮಾಂಡವೀಯ ತಿಳಿಸಿದ್ದಾರೆ.  

ಕೇಂದ್ರ ಸರ್ಕಾರ ಮುಂಗಡವಾಗಿಯೇ ಮಾಹಿತಿ ನೀಡಿದ್ದರೂ ಅವ್ಯವಸ್ಥೆ ಹಾಗೂ ಉದ್ದುದ್ದ ಸರತಿ ಸಾಲುಗಳನ್ನು ನೋಡುತ್ತಿದ್ದರೆ ಸಮಸ್ಯೆ ಏನೆಂಬುದು, ಸಮಸ್ಯೆಗೆ ಕಾರಣ ಏನೆಂಬುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT