ದೇಶ

ದೆಹಲಿ ಗಲಭೆ ವರದಿ ಪ್ರಶ್ನಿಸಿ ಅರ್ಜಿ: ಪ್ರತಿಕ್ರಿಯಿಸಲು ಕೇಂದ್ರಕ್ಕೆ ಹೆಚ್ಚಿನ ಕಾಲಾವಕಾಶ ನೀಡಿದ ಹೈಕೋರ್ಟ್!

Vishwanath S

ನವದೆಹಲಿ: 2020ರ ಫೆಬ್ರವರಿ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಅಲ್ಪಸಂಖ್ಯಾತ ಆಯೋಗ ರಚಿಸಿದ ಸತ್ಯ ಶೋಧನಾ ಸಮಿತಿಯ ವರದಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡಲು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರರಿಗೆ ಹೆಚ್ಚಿನ ಕಾಲಾವಕಾಶವನ್ನು ನೀಡಿದೆ.

ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ದ್ವಿಭಾಗಿಯ ಪೀಠಕ್ಕೆ ಕೇಂದ್ರದ ಪರ ಹಾಜರಾಗಿದ್ದ ವಕೀಲ ಮೋನಿಕಾ ಅರೋರಾ ಈ ವಿಷಯವಾಗಿ ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶವನ್ನು ಕೋರಿದ್ದರು. 

ಈ ಹಿಂದೆ ಇದೇ ನ್ಯಾಯಪೀಠ ಅರ್ಜಿಯ ಸಂಬಂಧ ದೆಹಲಿ ಪೊಲೀಸರು ಮತ್ತು ವರದಿಯ ಪ್ರಕಾಶಕರಿಂದಲೂ ಪ್ರತಿಕ್ರಿಯೆಗಾಗಿ ನೋಟಿಸ್ ನೀಡಿತ್ತು. 2020ರ ಜೂನ್ 27ರಂದು ಸತ್ಯ-ಶೋಧನಾ ಸಮಿತಿಯು ಪ್ರಕಟಿಸಿದ ವರದಿಯನ್ನು ರದ್ದುಗೊಳಿಸಲು ಮತ್ತು ಬದಿಗಿಡಲು ಪ್ರಯತ್ನಿಸಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 

ಹ್ಯೂಮನ್ ರೈಟ್ಸ್ ವಾಚ್, ಸಿಟಿಜನ್ಸ್ ಅಂಡ್ ಲಾಯರ್ಸ್ ಇನಿಶಿಯೇಟಿವ್ ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರಕಟಿಸಿದ ಹಲವಾರು ಖಾಸಗಿ ವರದಿಗಳನ್ನು ಸಹ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಹಿಂಸಾಚಾರ ಕುರಿತಂತೆ ಅರ್ಜಿದಾರ ಧರ್ಮೇಶ್ ಶರ್ಮಾ, ವರದಿಗಳ ರೂಪ ಮತ್ತು ವಿಷಯವನ್ನು ನ್ಯಾಯಾಂಗ ವೇದಿಕೆಗಳು ಮತ್ತು ಸಾರ್ವಜನಿಕರನ್ನು ಮೋಸಗೊಳಿಸಲು ವಿನ್ಯಾಸಗೊಳಿಸಲಾಗಿದೆ. ವರದಿಗಳು ಕಾನೂನಿನ ಅನುಸಾರ ತನಿಖೆ ಮತ್ತು ನಂತರದ ಕ್ರಮಗಳ ವಿರುದ್ಧ ಸಾರ್ವಜನಿಕರನ್ನು, ಜಗತ್ತನ್ನು ದೊಡ್ಡದಾಗಿ ಪೂರ್ವಾಗ್ರಹ ಮಾಡುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿದ್ದಾರೆ. 

2020ರ ಫೆಬ್ರವರಿಯಲ್ಲಿ, ದೆಹಲಿಯ ಈಶಾನ್ಯ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪರ ಮತ್ತು ವಿರೋಧಿಸುವ ಗುಂಪುಗಳ ನಡುವೆ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದರು. 

SCROLL FOR NEXT