ದೇಶ

ಮತ್ತೆ ಎಲ್ಒಸಿಯಲ್ಲಿ ಕಾಣಿಸಿಕೊಂಡ ಕ್ವಾಡ್ ಕಾಪ್ಟರ್, ಗುಂಡು ಹಾರಿಸಿದ ಭಾರತದ ಸೈನಿಕರು

Srinivasamurthy VN

ಜಮ್ಮು: ಇಂಡೋ-ಪಾಕ್ ಗಡಿಯಲ್ಲಿ ಮತ್ತೆ ಪಾಕಿಸ್ತಾನದ ಕ್ವಾಡ್‌ಕಾಪ್ಟರ್ ಮೇಲೆ ಭಾರತೀಯ ಸೈನಿಕರು ಗುಂಡು ಹಾರಿಸಿದ ಘಟನೆ ಎಲ್ಒಸಿಯಲ್ಲಿ ನಡೆದಿದೆ.

ಬುಧವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಜಮ್ಮುವಿನ ಪಲ್ಲನ್ವಾಕಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಭಾರತದ ಭೂಪ್ರದೇಶತ್ತ ಬರಲು ಪ್ರಯತ್ನಿಸಿದ ಕ್ವಾಡ್ ಕಾಪ್ಟರ್ ಮೇಲೆ ಸೇನಾಪಡೆಗಳು ಗುಂಡಿನದಾಳಿ ನಡೆಸಿವೆ.  ಸೈನಿಕರು ಗುಂಡಿನ ದಾಳಿ ಆರಂಭಿಸುತ್ತಿದ್ದಂತೆಯೇ ಕ್ವಾಡ್ ಕಾಪ್ಟರ್  ಪಾಕಿಸ್ತಾನದತ್ತ ಕಾಲ್ಕಿತ್ತಿದೆ.

ಅಂತೆಯೇ ಜಮ್ಮು ವಾಯುಪಡೆ ನಿಲ್ದಾಣದ ಬಳಿ ಮಿನುಗುವ ಬಿಳಿ ಬೆಳಕು ಪತ್ತೆಯಾಗಿತ್ತು. ಇದು ಡ್ರೋನ್ ಆಗಿರಬಹುದು ಎಂದು ಸೇನಾಧಿಕಾರಿಗಳು ಶಂಕಿಸಿದ್ದರು. ಆದರೆ ಆ ಪ್ರದೇಶದಲ್ಲಿ ಯಾವುದೇ ಡ್ರೋನ್ ಚಟುವಟಿಕೆ ಪತ್ತೆಯಾಗಿಲ್ಲ ಎಂದು ಐಎಎಫ್ ಹೇಳಿದೆ. 

ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿ ಬಳಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಮತ್ತೊಂದು ಡ್ರೋನ್ ಗೆ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಲೈ 2 ರಂದು, ಪಾಕಿಸ್ತಾನದ ಕ್ವಾಡ್ ಕಾಪ್ಟರ್  ಮೇಲೆ ಅರ್ನಿಯಾ  ವಲಯದಿಂದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿತು. ಆದರೆ ಬಿಎಸ್ಎಫ್ ಸಿಬ್ಬಂದಿಯಿಂದ ಗುಂಡು ಹಾರಿಸಿದ ನಂತರ ಅದು ಹಿಮ್ಮೆಟ್ಟಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಭಾರತದೊಳಗಿನ ಸೈನಿಕ ಚಲನವಲನಗಳ ಮೇಲೆ ಕಣ್ಣಿಡಲು ಇದೇ ಮೊದಲ ಬಾರಿಗೆ ಪಾಕ್ ಮೂಲದ ಭಯೋತ್ಪಾದಕರು ಡ್ರೋನ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಇದೇ ಡ್ರೋನ್ ಗಳನ್ನು ಬಳಸಿ ಜೂನ್ 27 ರ ಮುಂಜಾನೆ ಜಮ್ಮು ನಗರದ ಐಎಎಫ್ ನಿಲ್ದಾಣದಲ್ಲಿ ಎರಡು ಬಾಂಬ್‌ಗಳನ್ನು ಎಸೆಯಲಾಗಿತ್ತು.  ಈ ಘಟ6ನೆಯಲ್ಲಿ ಇಬ್ಬರು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಈ ಘಟನೆ ಬಳಿಕ ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಲ್ಲಿ ವಿವಿಧ ಜಿಲ್ಲೆಗಳಲ್ಲಿನ ಅಧಿಕಾರಿಗಳು ಡ್ರೋನ್ ಗಳು ಮತ್ತು ಇತರ ಮಾನವರಹಿತ ವೈಮಾನಿಕ ವಾಹನಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು ಅಥವಾ  ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸಿದ್ದಾರೆ. 
 

SCROLL FOR NEXT