ದೇಶ

ಕಾಂಗ್ರೆಸ್ ಅಧ್ಯಕ್ಷರ ಯಾವುದೇ ನಿರ್ಧಾರ ಸ್ವೀಕಾರಾರ್ಹ: ಅಮರೀಂದರ್

Nagaraja AB

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರು ತೆಗೆದುಕೊಳ್ಳುವ ಯಾವುದೇ ನಿರ್ಧಾರ ಎಲ್ಲರಿಗೂ ಸ್ವೀಕಾರಾರ್ಹವಾಗಿರುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಶನಿವಾರ ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಜೊತೆಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮರೀಂದರ್ ಸಿಂಗ್, ಹರೀಶ್ ರಾವತ್ ಜೊತೆಗಿನ ಸಭೆ ಫಲಪ್ರಧವಾಗಿದೆ. ಕಾಂಗ್ರೆಸ್ ಅಧ್ಯಕ್ಷರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುವುದಾಗಿ ಪುನರುಚ್ಚರಿಸಿದರು. ಕೆಲವೊಂದು ಸಮಸ್ಯೆಗಳ ಬಗೆಗೆ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.

ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವಣ ಭಿನ್ನಾಭಿಪ್ರಾಯ ಶಮನಕ್ಕಾಗಿ ರಾವತ್ ಚಂಡೀಘಡಕ್ಕೆ ಆಗಮಿಸಿದ್ದಾರೆ. ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಪ್ರದೇಶ ಸಮಿತಿಯ ಅಧ್ಯಕ್ಷರಾಗುವ ಸಾಧ್ಯತೆಯಿದೆ.

ಅಮರೀಂದರ್ ಸಿಂಗ್ ಶುಕ್ರವಾರ ಸೋನಿಯಾಗಾಂಧಿಗೆ ಪತ್ರ ಬರೆದ ಬೆನ್ನಲ್ಲೇ ರಾವತ್ ಇಂದು ಚಂಡೀಘಡಕ್ಕೆ ಆಗಮಿಸಿದ್ದು, ಮೊಹಾಲಿಯಲ್ಲಿರುವ ಮುಖ್ಯಮಂತ್ರಿಯ ಫಾರ್ಮ್ ಹೌಸ್ ನಲ್ಲಿ ಮಾತುಕತೆ ನಡೆಸಿದರು. 

ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವುದರಿಂದ ಹಿಂದೂ ಸಮುದಾಯ ಪ್ರತಿನಿಧಿಸುವ ಪಕ್ಷದ ಹಿರಿಯ ನಾಯಕರು ಅಸಮಾಧಾನಗೊಂಡು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಅಮರೀಂದರ್ ಸಿಂಗ್ ಪತ್ರದಲ್ಲಿ ಹೇಳಿದ್ದರು ಎನ್ನಲಾಗಿದೆ.

SCROLL FOR NEXT