ದೇಶ

ಸರ್ವರಿಗೂ ಲಸಿಕೆ ಅಭಿಯಾನದಿಂದ 24 ದಿನದಲ್ಲಿ 30 ರಿಂದ 40 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ: ಆರೋಗ್ಯ ಸಚಿವ ಮಾಂಡವಿಯಾ

Srinivasamurthy VN

ನವದೆಹಲಿ: ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ಅಭಿಯಾನದಿಂದಾಗಿ 24 ದಿನಗಳ ಅವಧಿಯಲ್ಲಿ 30 ರಿಂದ 40 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವದ ಅತಿದೊಡ್ಡ ಮತ್ತು ವೇಗದ ವ್ಯಾಕ್ಸಿನೇಷನ್ ಅಭಿಯಾನವು ನಿರಂತರವಾಗಿ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ. ಆರಂಭಿಕ ದಿನಗಳಲ್ಲಿ, 10 ಕೋಟಿಗೆ ಲಸಿಕೆ ನೀಡಲು 85 ದಿನಗಳು ಬೇಕಾದವು, ಆದರೆ 'ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ'  ಅಭಿಯಾನದಿಂದಾಗಿ, ಭಾರತವು ಕೇವಲ 30 ರಿಂದ 40 ಕೋಟಿ ಡೋಸ್ ತಲುಪಲು ಕೇವಲ 24 ದಿನಗಳನ್ನು ತೆಗೆದುಕೊಂಡಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೋವಿಡ್ ಲಸಿಕೆ ವಿತರಣೆ ಆರಂಭಾವದ ಬಳಿಕ ಮೊದಲ 10 ಕೋಟಿ ಜನರನ್ನು ತಲುಪಲು 85 ದಿನಗಳಲ್ಲಿ ತೆಗೆದುಕೊಂಡಿತ್ತು. ಆದರೆ ಕೇಂದ್ರ ಸರ್ಕಾರ ಲಸಿಕೆ ಸಾರ್ವತ್ರಿಕೀಕರಣ ಗೊಳಿಸಿದ ಬಳಿಕ 24 ದಿನಗಳಲ್ಲಿ 30 ರಿಂದ 40 ಕೋಟಿ ಡೋಸ್ ಲಸಿಕೆ  ವಿತರಿಸಲಾಗಿದೆ. ಜೂನ್ 21ರಿಂದ ಲಸಿಕೆ ಸಾರ್ವತ್ರಿಕೀಕರಣದ ಹೊಸ ಹಂತವು ಆರಂಭವಾಗಿತ್ತು. ಅಂದಿನಿಂದ ಇಲ್ಲೀ ವರೆಗೂ ಸುಮಾರು 30 ರಿಂದ 40 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಭಾರತದ ಕೋವಿಡ್-19 ವ್ಯಾಕ್ಸಿನೇಷನ್ ವ್ಯಾಪ್ತಿ ಇದೀಗ 40.64 ಕೋಟಿ ಮೀರಿದೆ. ಹೆಚ್ಚಿನ ಲಸಿಕೆಗಳ ಲಭ್ಯತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಗಡ ಲಸಿಕೆ ಲಭ್ಯತೆ (ಯುಟಿಗಳು) ಮತ್ತು ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸುವುದರ ಮೂಲಕ ಇನಾಕ್ಯುಲೇಷನ್ ಡ್ರೈವ್ (ಲಸಿಕೆ  ಅಭಿಯಾನ) ಅನ್ನು ಹೆಚ್ಚಿಸಲಾಗಿದೆ. ಲಸಿಕೀಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದಿಸಲಾಗುತ್ತಿರುವ ಲಸಿಕೆಗಳ ಶೇ.75 ರಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಗ್ರಹಿಸುತ್ತದೆ ಮತ್ತು ಪೂರೈಸುತ್ತದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಪ್ರಸ್ತುತ ಭಾರತದಲ್ಲಿ 40,64,81,493 ಡೋಸ್ ಲಸಿಕೆಯನ್ನು 50,69,232 ಸೆಷನ್‌ಗಳ ಮೂಲಕ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಪೈಕಿ ಕಳೆದ 24 ಗಂಟೆಗಳ ಅವಧಿಯಲ್ಲಿ 13,63,123 ಡೋಸ್ ಲಸಿಕೆಯನ್ನು 24 ಗಂಟೆಗಳ ಅವಧಿಯಲ್ಲಿ ನೀಡಲಾಗಿದೆ ಎಂದು ಸಚಿವಾಲಯ  ಮಾಹಿತಿ ನೀಡಿದೆ.  
 

SCROLL FOR NEXT