ದೇಶ

ಪೆಗಾಸಸ್ ಸ್ಪೈ ವೇರ್ ನಿಂದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ, ಸಂಸತ್ತಿನಲ್ಲಿ ಪ್ರಶ್ನಿಸುತ್ತೇವೆ: ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ

Srinivasamurthy VN

ನವದೆಹಲಿ: ಇಸ್ರೇಲ್ ಮೂಲದ ಪೆಗಾಸಸ್ ಸ್ಪೈ ವೇರ್ ಮೂಲಕ ಪತ್ರಕರ್ತರು ಮತ್ತು ಹೋರಾಟಗಾರರ ಫೋನ್‌ಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯ ವರದಿಗಳ ನಡುವೆಯೇ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪ ಮಾಡುವುದಾಗಿ  ಸೋಮವಾರ ಹೇಳಿದ್ದಾರೆ.

"ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ. ನಾನು ಖಂಡಿತವಾಗಿಯೂ ಪೆಗಾಸಸ್ ಸ್ಪೈವೇರ್ ಸಮಸ್ಯೆ ಕುರಿತ ಸದನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಇನ್ನು ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಮುನ್ನ, ಹಲವಾರು ಸದಸ್ಯರು ಪೆಗಾಸಸ್ ಸ್ಪೈವೇರ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ ಅಧಿವೇಶನದಲ್ಲಿ ಈ ಕುರಿತ ವಿಚಾರ ಮಂಡನೆಗೆ ನೋಟಿಸ್ ಕೂಡ ನೀಡಿದ್ದರು. ಆದರೆ ಸದಸ್ಯರ ನೋಟಿಸ್ ಅನ್ನು ಅಮಾನತುಗೊಳಿಸಲಾಗಿದೆ. ಆಪ್  ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಪೆಗಾಸಸ್ ಸ್ಪೈವೇರ್ ಕುರಿತ ಅಂಶಗಳನ್ನು ಬಹಿರಂಗಪಡಿಸಿದ ಕಾರಣ ನಿಯಮ 267 ರ ಅಡಿಯಲ್ಲಿ ವ್ಯವಹಾರ ನೋಟಿಸ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಪೆಗಾಸಸ್ ಸ್ಪೈವೇರ್ ಬಳಸುವ ಅಪರಿಚಿತ ಏಜೆನ್ಸಿಯ ಕಣ್ಗಾವಲುಗಾಗಿ ಸಂಭವನೀಯ ಗುರಿಗಳ ಪಟ್ಟಿಯಲ್ಲಿ 40 ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಹೆಸರುಗಳು ಕಾಣಿಸಿಕೊಂಡ ನಂತರ ಈ ಬೆಳವಣಿಗೆ ಸಂಭವಿಸಿದೆ ಎಂದು ದಿ ವೈರ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

ವರದಿ ನಿರಾಕರಿಸಿದ ಕೇಂದ್ರ ಸರ್ಕಾರ
ಏತನ್ಮಧ್ಯೆ, ವಿಪಕ್ಷಗಳ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿದ್ಯುನ್ಮಾನ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು, 'ನಿರ್ದಿಷ್ಟ ಜನರ ಮೇಲೆ ಸರ್ಕಾರದ ಕಣ್ಗಾವಲು ಕುರಿತ ಆರೋಪಗಳಿಗೆ ಯಾವುದೇ ದೃಢವಾದ ಆಧಾರ ಅಥವಾ ಸತ್ಯವಿಲ್ಲ. ಈ ಹಿಂದೆ,  ರಾಜ್ಯಗಳು ವಾಟ್ಸ್‌ಆ್ಯಪ್‌ನಲ್ಲಿ ಪೆಗಾಸಸ್ ಅನ್ನು ಬಳಸುವುದರ ಬಗ್ಗೆ ಇದೇ ರೀತಿಯ ವಾದ ಮಂಡಿಸಿದ್ದವು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರಗಳಿರಲಿಲ್ಲ ಮತ್ತು ನಿರ್ದಿಷ್ಟವಾಗಿ ಭಾರತೀಯ ಸುಪ್ರೀಂ ಕೋರ್ಟ್‌ನಲ್ಲಿ ವಾಟ್ಸಾಪ್ ಸೇರಿದಂತೆ ಎಲ್ಲಾ ಅರ್ಜಿದಾರರ ಆರೋಪಗಳನ್ನು ನಿರಾಕರಿಸಲಾಗಿತ್ತು. ಈ  ವರದಿಯು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಕೆಣಕುವ ಊಹೆಗಳು ಮತ್ತು ಉತ್ಪ್ರೇಕ್ಷೆಗಳ ಆಧಾರದ ಮೇಲೆ ಇದೇ ರೀತಿಯ ಪಿತೂರಿಯಾಗಿದೆ ಎಂದು ಎಲೆಕ್ಟ್ರಾನಿಕ್ಸ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಸ್ಪೈವೇರ್ 'ಪೆಗಾಸಸ್' ಅನ್ನು ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್ ಅಭಿವೃದ್ಧಿಪಡಿಸಿದ್ದು, ಈ ಕಂಪನಿಯು ಸ್ಮಾರ್ಟ್ ಗ್ಯಾಜೆಟ್ ಗಳನ್ನು ಹ್ಯಾಕ್ ಮಾಡುವಲ್ಲಿ ಪರಿಣತಿ ಹೊಂದಿದೆ ಮತ್ತು ಬೇಹುಗಾರಿಕೆ ಉದ್ದೇಶಗಳಿಗಾಗಿ ವಿಶ್ವದ ವಿವಿಧ ಸರ್ಕಾರಗಳಿದೆ ಇದು ಸೇವೆ ಪೂರೈಸುತ್ತದೆ ಎಂದು ಹೇಳಲಾಗಿದೆ.

ಪ್ರಸ್ತುತ ಪ್ರಕಟವಾಗಿರುವ ವರದಿಯಲ್ಲಿ ಕೆಲವು ಪತ್ರಕರ್ತರ ಫೋನ್‌ಗಳು ಪೆಗಾಸಸ್ ಮಾಲ್‌ವೇರ್‌ನಿಂದ ಒಳಪಟ್ಟಿವೆ ಎಂದು ವಿಧಿವಿಜ್ಞಾನ ಪರೀಕ್ಷೆಗಳು ಖಚಿತಪಡಿಸಿವೆ ಎಂದು ತಿಳಿಸಿದೆ. ವರದಿಯಲ್ಲಿರುವಂತೆ ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ, ಇಂಡಿಯಾ ಟುಡೆ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ನೆಟ್‌ವರ್ಕ್ 18  ಸೇರಿದಂತೆ ದೇಶದ ಕೆಲವು ಸುದ್ದಿ ಸಂಸ್ಥೆಗಳಿಗೆ ಸೇರಿದ ಪತ್ರಕರ್ತರ ಫೋನ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆ ಮಾಡಲಾಗಿದೆ. ಅಲ್ಲದೆ ಅವುಗಳಲ್ಲಿ ಹಲವು ರಕ್ಷಣಾ, ಗೃಹ ಸಚಿವಾಲಯ, ಚುನಾವಣಾ ಆಯೋಗ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.

ದಿ ವೈರ್ ಸ್ಥಾಪಕ-ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಅವರ ಫೋನ್‌ಗಳನ್ನು ಸಹ ಪೆಗಾಸಸ್ ಸ್ಪೈವೇರ್ ಹ್ಯಾಕ್ ಮಾಡಲಾಗಿದೆ. ಅಲ್ಲದೆ ಕೆಲ ಪ್ರಮುಖ ಪತ್ರಕರ್ತರಾದ ಶಿಶಿರ್ ಗುಪ್ತಾ, ಪ್ರಶಾಂತ್ ಝಾ, ರಾಹುಲ್ ಸಿಂಗ್, ಸಂದೀಪ್ ಉನ್ನಿತಾನ್, ಮನೋಜ್ ಗುಪ್ತಾ, ವಿಜೈತ ಸಿಂಗ್  ಮತ್ತು ಜೆ ಗೋಪಿಕೃಷ್ಣನ್ ಅವರ ಫೋನ್ ಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ದಿ ವೈರ್ ಪ್ರಕಾರ, ಸೋರಿಕೆಯಾದ ಪಟ್ಟಿಯ ಮಾಹಿತಿಯನ್ನು ಮೊದಲು ಫ್ರಾನ್ಸ್ ಮೂಲದ ಫಾರ್ಬಿಡನ್ ಸ್ಟೋರೀಸ್ ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಕಲೆಹಾಕಿತ್ತು,  ನಂತರ 'ಪೆಗಾಸಸ್ ಪ್ರಾಜೆಕ್ಟ್' ಹೆಸರಿನ ಸಹಯೋಗದ ತನಿಖೆಯ ಭಾಗವಾಗಿ ದಿ ವೈರ್ ಮತ್ತು ವಿಶ್ವದಾದ್ಯಂತ 15 ಇತರ ಸುದ್ದಿ  ಸಂಸ್ಥೆಗಳೊಂದಿಗೆ ಹಂಚಿಕೊಂಡಿತು. ಆದರೆ ವರದಿಯಲ್ಲಿ ಫೋನ್ ಗಳು ಖಚಿತವಾಗಿ ಹ್ಯಾಕ್ ಆಗಿತ್ತೇ ಅಥವಾ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆಯೇ ಎಂಬ ಪ್ರಶ್ನೆಗೆ ಖಚಿತ ಉತ್ತರ ದೊರೆತಿಲ್ಲ. 10 ಭಾರತೀಯ ಫೋನ್‌ಗಳಲ್ಲಿ ನಡೆಸಿದ ಸ್ವತಂತ್ರ ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಣೆ ಅನ್ವಯ ಹ್ಯಾಕಿಂಗ್  ಪ್ರಯತ್ನಗಳು ಅಥವಾ ಯಶಸ್ವಿ ಪೆಗಾಸಸ್ ಹ್ಯಾಕ್‌ನ ಚಿಹ್ನೆಗಳನ್ನು ತೋರಿಸಿದೆ ಎಂದು ದಿ ವೈರ್ ವರದಿ ಮಾಡಿದೆ. 

ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ತೀವ್ರ ಕಿಡಿ
ಇನ್ನು ಪೆಗಾಸಸ್ ಸ್ಪೈ ವೇರ್ ಪ್ರಕರಣದ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡುತ್ತಿವೆ.  

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಜ್ಯಸಭೆ ನಾಯಕ ಆನಂದ್ ಶರ್ಮ ಅವರು, 'ಈ ವಿಚಾರ ಚರ್ಚೆಯಾಗಲೇಬೇಕಿದೆ. ಇದು ಸರ್ಕಾರದಿಂದ ಬೇಹುಗಾರಿಕೆ. ಇದು ಬಹಳ ಗಂಭೀರ ವಿಚಾರ ಹಾಗೂ ನಾಗರಿಕರ ಗೌಪ್ಯತೆಯನ್ನು ಹತ್ತಿಕ್ಕುತ್ತದೆ. ನಾವು ಇದನ್ನು  ಪರಿಶೀಲಿಸಬೇಕು ಎಂದೆಲ್ಲಾ ಹೇಳಿಕೊಂಡು  ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಯಾವ ಏಜನ್ಸಿಗಳು ಪೆಗಾಸಸ್ ಅನ್ನು ಖರೀದಿಸಿದ್ದವು?.. ಈ ಕುರಿತು ತನಿಖೆ ನಡೆಯಬೇಕಿದೆ, ಸರಕಾರದಿಂದ ತನಿಖೆಯಲ್ಲ. ಇದರ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ. ನಾವು ಇದಕ್ಕಾಗಿ ಹೋರಾಡುತ್ತೇವೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಈ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ. ಭಾರತ ಸರ್ಕಾರ ಪೆಗಾಸಸ್ ಅನ್ನು ಬಳಸಿಲ್ಲ ಎಂದು ಹೇಳುವಲ್ಲಿ ಸರ್ಕಾರ ಪ್ರಾಮಾಣಿಕವಾಗಿದೆ ಎಂದಾದರೆ ವಿದೇಶಿ ಸರ್ಕಾರ ಭಾರತೀಯ ನಾಗರಿಕರ ಮೇಲೆ ಗೂಢಚರ್ಯೆ ನಡೆಸಿದೆ ಎಂದಾಗುತ್ತದೆ" ಎಂದು ಅವರು  ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ವಿಚಾರ ಟ್ವೀಟ್ ಮಾಡಿದ್ದು, "ನಮಗೆ ಗೊತ್ತು ಅವರೇನು ಓದುತ್ತಿದ್ದಾರೆಂದು-ನಿಮ್ಮ ಫೋನ್‍ನಲ್ಲಿರುವುದೆಲ್ಲವೂ#ಪೆಗಾಸಸ್" ಎಂದು ಟ್ವೀಟ್ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಸರ್ಕಾರ ತಾನು ಎನ್‍ಎಸ್‍ಒ ಗ್ರೂಪ್ ನ ಸ್ಪೈವೇರ್ ಬಳಸಿದೆಯೇ ಎಂದು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.

SCROLL FOR NEXT