ದೇಶ

ಪೆಗಾಸಸ್ ವಿವಾದ: 2019ರಲ್ಲಿ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಬಿಜೆಪಿಗೆ ಬೇಹುಗಾರಿಕೆ ಸಹಾಯ ಸಾಧ್ಯತೆ; ವರದಿ

Vishwanath S

ನವದೆಹಲಿ: ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸುವ ಮೊದಲು ಎಚ್‌ಡಿ ಕುಮಾರಸ್ವಾಮಿ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದ ಮೊಬೈಲ್ ಸಂಖ್ಯೆಗಳು ಪೆಗಾಸಸ್ ಬೇಹುಗಾರಿಕೆಗೆ ಸಂಭವನೀಯ ಗುರಿಗಳಾಗಿವೆ ಎಂದು ದಿ ವೈರ್‌ ವರದಿ ಪ್ರಕಟಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. 

ಈ ವರದಿಯಲ್ಲಿ 2019ರ ಜುಲೈನಲ್ಲಿ ಸರ್ಕಾರದ ಪತನ ಮತ್ತು ಬಿಜೆಪಿ ಸರ್ಕಾರ ರಚನೆಗೆ ಬಳಕೆಯಾಗಿರಬಹುದು ಎಂದು ಪ್ರಕಟಿಸಲಾಗಿದೆ. ಆದಾಗ್ಯೂ, ಮೊಬೈಲ್ ನಂಬರ್ ಗಳನ್ನು ಹ್ಯಾಕ್ ಮಾಡಿರುವ ಕುರಿತು ಸ್ಪಷ್ಟಪಡಿಸುವ ಯಾವುದೇ ಪುರಾವೆಗಳಿಲ್ಲ.

ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಂದಿನ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಮೊಬೈಲ್ ಸಂಖ್ಯೆಗಳು ಸರ್ಕಾರವನ್ನು ಉರುಳಿಸುವ ಮುನ್ನವೇ ಬೇಹುಗಾರಿಕೆಗೆ ಗುರಿಯಾಗಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ 17 ಮಂದಿ ಶಾಸಕರು ದಿಢೀರ್ ರಾಜಿನಾಮೆ ನೀಡಿದ್ದರು. ಹೀಗಾಗಿ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತ ಯಾಚನೆಗೆ ಕಾರಣವಾಗಿತ್ತು. ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್-ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಡುವೆ ಅಧಿಕಾರಕ್ಕಾಗಿ ತೀವ್ರ ಸಂಘರ್ಷ ನಡೆಯುತ್ತಿದ್ದ ಸಮಯದಲ್ಲಿ ಕರ್ನಾಟಕದ ಕೆಲ ರಾಜಕಾರಣಿಗಳ ಮೊಬೈಲ್ ನಂಬರ್ ಪೆಗಾಸಸ್ ನಲ್ಲಿ ಗೂಢಚರ್ಯೆ ನಡೆಸಲು ಆಯ್ಕೆ ಮಾಡಲಾಗಿದೆ ಎಂದು ದಾಖಲೆಗಳು ಸೂಚಿಸುತ್ತವೆ. 

ಅವರ ಮೊಬೈಲ್ ಸಂಖ್ಯೆಗಳು ಫ್ರೆಂಚ್ ಮಾಧ್ಯಮ ಫರ್ಬಿಡನ್ ಸ್ಟೋರೀಸ್ ಪಡೆದಿರುವ ಸೋರಿಕೆಯಾದ ಪೆಗಾಸಸ್ ಸ್ಪೈವೇರ್ ಡೇಟಾಬೇಸ್ ನ ಭಾಗವಾಗಿದೆ. ಈ ಮಾಹಿತಿಯನ್ನು ದಿ ಪೆಗಾಸಸ್ ಪ್ರಾಜೆಕ್ಟ್ ನ ಭಾಗವಾಗಿ ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಮತ್ತು ದಿ ವೈರ್ ಅನ್ನು ಒಳಗೊಂಡ ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟದೊಂದಿಗೆ ಹಂಚಿಕೊಂಡಿದೆ. 

ಇಸ್ರೇಲ್ ನ ಎನ್ಎಸ್ಒ ಗ್ರೂಪ್ ಭಾರತೀಯ ಕ್ಲೈಂಟ್ ಗೆ ಆಸಕ್ತಿಯಿರುವ ಸಂಖ್ಯೆಗಳ ದಾಖಲೆಗಳ ಪರಿಶೀಲನೆಯಲ್ಲಿ ಈ ಸಂಖ್ಯೆಗಳನ್ನು ಗುರುತಿಸಲಾಗಿದೆ ಎಂದು ವರದಿ ಹೇಳಿದೆ. ಎನ್ಎಸ್ಎ ಗ್ರೂಪ್ ತನ್ನ ಪೆಗಾಸಸ್ ಸ್ಪೈವೇರ್ ಅನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುತ್ತದೆ.

SCROLL FOR NEXT