ದೇಶ

ದೆಹಲಿಯ ಜಂತರ್ ಮಂತರ್ ಮುಂದೆ ಇಂದು ರೈತರ ಪ್ರತಿಭಟನೆ; ಪೊಲೀಸರಿಂದ ತೀವ್ರ ಭದ್ರತೆ

Sumana Upadhyaya

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸಾಗುತ್ತಿರುವುದರ ಮಧ್ಯೆ ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತ ರೈತರು ಸರ್ಕಾರದ ಗಮನವನ್ನು ಮತ್ತಷ್ಟು ಸೆಳೆಯಲು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಕೇಂದ್ರ ಸರ್ಕಾರದ ಮೂರು ರೈತ ಕಾಯ್ದೆಯ ವಿರುದ್ಧ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆಗೆ ಸಜ್ಜಾಗುತ್ತಿದ್ದಂತೆ ದೆಹಲಿ ಪೊಲೀಸರು ತೀವ್ರ ಭದ್ರತೆ ಕಲ್ಪಿಸಿದ್ದಾರೆ. ಇಂದು ಬೆಳಗ್ಗೆಯೇ ಜಂತರ್ ಮಂತರ್ ಗೆ ಸಾಗುವ ಮುನ್ನ ಸಿಂಘು ಗಡಿಯಲ್ಲಿ ರೈತರು ಜಮಾಯಿಸಿದ್ದಾರೆ. ದೆಹಲಿ ಗಡಿಭಾಗದಲ್ಲಿ ಮತ್ತು ಜಂತರ್ ಮಂತರ್ ನಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.

ಸರ್ಕಾರದ ಷರತ್ತು: ಜಂತರ್ ಮಂತರ್ ಮುಂದೆ ಷರತ್ತು ಮೇಲೆ ಪ್ರತಿಭಟನೆ ನಡೆಸಲು ರೈತರಿಗೆ ಅನುಮತಿ ನೀಡಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚದ 200 ಸದಸ್ಯರಿಗೆ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ 6 ಮಂದಿಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದ್ದು, ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ ನಾಯಕ ರಾಕೇಶ್ ಟಿಕಾಯತ್, ನಾನು ಮತ್ತು ಇತರ 8 ಮಂದಿ ಸಿಂಘು ಗಡಿಯಿಂದ ಜಂತರ್ ಮಂತರ್ ಗೆ ತೆರಳುತ್ತೇವೆ. ಜಂತರ್ ಮಂತರ್ ನಲ್ಲಿ ಕಿಸಾನ್ ಸಂಸದ್ ನಡೆಸಿ ಸಂಸತ್ತಿನ ಕಲಾಪವನ್ನು ಗಮನಿಸುತ್ತಿರುತ್ತೇವೆ ಎಂದರು.

SCROLL FOR NEXT