ದೇಶ

ಗುಜರಾತ್: ಎಲ್'ಪಿಜಿ ಸಿಲಿಂಡರ್ ಸ್ಫೋಟ, 7 ಮಂದಿ ದಾರುಣ ಸಾವು

Manjula VN

ಅಹ್ಮದಾಬಾದ್: ಗುಜರಾತ್​​ ರಾಜ್ಯದ ಅಹ್ಮದಾಬಾದ್​​'ನ ಹೊರವಲಯದಲ್ಲಿನ ಕಾರ್ಖಾನೆಯೊಂದರಲ್ಲಿ ಎಲ್​ಪಿಜಿ ಸಿಲಿಂಡರ್​​ ಸ್ಫೋಟಗೊಂಡ ಪರಿಣಾಮ 7 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಸ್ಲಾಲಿ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಎಸ್.ಎಸ್.ಗಮೇಟಿ ಶುಕ್ರವಾರ ಮಾಹಿತಿ ನೀಡಿದ್ದಾರೆ. 

ಕಾರ್ಖಾನೆಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರ ಕುಟುಂಬದ ಸದಸ್ಯರು ಕಾರ್ಖಾನೆಯಲ್ಲಿದ್ದ ಒಂದು ಸಣ್ಣ ಕೋಣೆಯಲ್ಲಿ ಮಲಗಿದ್ದರು. ಈ ಕೋಣೆಯಲ್ಲಿದ್ದ ಎಲ್'ಪಿಜಿ ಸಿಲಿಂಡರ್ ಇದ್ದಕ್ಕಿದ್ದಂತೆ ಸೋರಿಕೆಯಾಗಿದೆ. ಬಳಿಕ ನೆರೆಮನೆಯವರು ಬಾಗಿಲು ತಟ್ಟಿ ಮಲಗಿದ್ದವರನ್ನು ಎಬ್ಬಿಸಿದ್ದಾರೆ. ಕೆಲವರು ಬಾಗಿಲು ತೆಗೆಯುವ ವೇಳೆ ಲೈಟ್ ಆನ್ ಮಾಡಿದ್ದು, ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. 

ಘಟನೆ ವೇಳೆ ಕೋಣೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ ಒಟ್ಟು 10 ಮಂದಿ ಇದ್ದು, ಅವರಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮೃತಪಟ್ಟವರು ಮಧ್ಯಪ್ರದೇಶ ಮೂಲದವರೆಂದು ಹೇಳಲಾಗುತ್ತಿದ್ದು, ಘಟನೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ತಲಾ ರೂ.4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

SCROLL FOR NEXT