ದೇಶ

ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವ ಪ್ರಕಣಗಳ ಸಂಖ್ಯೆ ಸಾರ್ವಕಾಲಿಕ ಏರಿಕೆ!

Srinivas Rao BV

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಹಲವು ಕ್ಷೇತ್ರಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿರುವುದಷ್ಟೇ ಅಲ್ಲದೇ ನ್ಯಾಯದಾನ ಪ್ರಕ್ರಿಯೆಯನ್ನೂ ಕುಂಠಿತಗೊಳಿಸಿದೆ. 

ಇತ್ತೀಚಿನ ದಿನಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಕೋರ್ಟ್ ಗಳು ನಿರ್ಧರಿಸಿದ್ದರ ಪರಿಣಾಮ ನ್ಯಾಯಾಂಗದ ಪ್ರಕ್ರಿಯೆಗಳು ಚುರುಕು ಪಡೆಯುತ್ತಿದ್ದವು. ಆದರೆ ಈ ವರ್ಷದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಶೇ.4.3 ರಷ್ಟು ಏರಿಕೆಯಾಗಿದೆ. 

ಬಾಕಿ ಇರುವ ಪ್ರಕರಣಗಳ ಸಂಖ್ಯೆ 2021 ರ ಜನವರಿಯಿಂದ ಮೇ ವರೆಗೂ 68,000 ಕ್ಕೆ ಏರಿಕೆಯಾಗಿದ್ದು ಸಾರ್ವಕಾಲಿಕ ಏರಿಕೆಯಾಗಿದೆ. 2020 ರಲ್ಲಿ ಶೇ.1.4 ರಷ್ಟು ಇನ್ನಷ್ಟೇ ಇತ್ಯರ್ಥಗೊಳ್ಳಬೇಕಿದ್ದ ಪ್ರಕರಣಗಳಿದ್ದವು. 2019 ರಲ್ಲಿ ಶೇ.1.7 ರಷ್ಟಾಗಿತ್ತು. ಈಗ 2021 ರಲ್ಲಿ ಶೇ.4.3 ರಷ್ಟು ಪ್ರಕರಣಗಳು ಇನ್ನಷ್ಟೇ ಇತ್ಯರ್ಥಗೊಳ್ಳಬೇಕಿದೆ.

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಎಂದಿನ ದಿನಗಳಿಗಿಂತಲೂ ಹೆಚ್ಚಿನ ಸಮಯ ಕೆಲಸ ಮಾಡಿದೆ. ಆದರೆ ಭೌತಿಕ ವಿಚಾರಣೆಗಿಂತಲೂ ಕೋರ್ಟ್ ನ ಕಲಾಪಗಳು ಆನ್ ಲೈನ್ ಮೂಲಕ ನಡೆದಿದ್ದು ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಆನ್ ಲೈನ್ ವಿಚಾರಣೆಯ ಪ್ರಾರಂಭದ ದಿನಗಳಲ್ಲಿ ಪ್ರಮುಖವಾದ ಪ್ರಕರಣಗಳನ್ನಷ್ಟೇ ಕೈಗೆತ್ತಿಕೊಳ್ಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಕ್ರಮೇಣ ಇನ್ನಿತರ ಪ್ರಕರಣಗಳನ್ನೂ ವಿಚಾರಣೆ ನಡೆಸಲಾಗುತ್ತಿತ್ತು.

ಸುಪ್ರೀಂ ಕೋರ್ಟ್ ಗೆ 34 ನ್ಯಾಯಾಧೀಶರನ್ನು ನೀಡಲಾಗಿದೆ. ಆದರೆ ಈ ಪೈಕಿ 27 ನ್ಯಾಯಾಧೀಶರಷ್ಟೇ ಈಗ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಇನ್ನಿಬ್ಬರು ನ್ಯಾಯಾಧೀಶರು ನಿವೃತ್ತರಾಗಲಿದ್ದಾರೆ ಮುಂದಿನ ವರ್ಷವೂ ಇಬ್ಬರು ನ್ಯಾಯಾಧೀಶರು ನಿವೃತ್ತರಾಗಲಿದ್ದು, ನ್ಯಾಯಾಧೀಶರ ಸಂಖ್ಯೆಯ ಇಳಿಕೆಯ ಪರಿಣಾಮ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.

SCROLL FOR NEXT