ದೇಶ

ಪೆಗಾಸಸ್ ಗೂಢಚರ್ಯೆ ಆರೋಪ: ಸುಪ್ರೀಂ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಶಶಿ ತರೂರ್ ಆಗ್ರಹ

Srinivas Rao BV

ನವದೆಹಲಿ: ಪೆಗಾಸಸ್ ಗೂಢಚರ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಕಾಂಗ್ರೆಸ್ ನಾಯಕ ಶಶಿ ತರೂರ್ ಆಗ್ರಹಿಸಿದ್ದಾರೆ. 

ಜು.19 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದಲೂ ವಿಪಕ್ಷಗಳು ಪೆಗಾಸೆಸ್ ಸ್ಪೈವೇರ್ ಗೂಢಚರ್ಯೆಯ ಬಗ್ಗೆ ಸಂಸತ್ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿವೆ. ಆದರೆ ಸರ್ಕಾರ ಈವರೆಗೂ ಚರ್ಚೆಗೆ ಅನುಮತಿ ನೀಡಿಲ್ಲ. ಪರಿಣಾಮ ಗದ್ದಲ ಉಂಟಾಗಿ ಸಂಸತ್ ಕಲಾಪ ವ್ಯರ್ಥವಾಗುತ್ತಿದೆ. 

ಈಗ ಶಶಿ ತರೂರ್ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಆಗ್ರಹಿಸಿದ್ದು, ಚರ್ಚೆಗೆ ಅವಕಾಶ ನೀಡುವವರೆಗೂ ಸಂಸತ್ ನ ಸುಗಮನ ಕಲಾಪಕ್ಕೆ ವಿಪಕ್ಷಗಳು ಅವಕಾಶ ನೀಡುವುದಿಲ್ಲ ಎಂಬ ಸಂದೇಶ ರವಾನೆ ಮಾಡಿವೆ. ಸರ್ಕಾರದ ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿ ಗೂಢಚರ್ಯೆ ನಡೆಸಲು ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ ಎಂದು ಶಶಿ ತರೂರ್ ಆರೋಪಿಸಿದ್ದಾರೆ. 

ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಭಾರತದಲ್ಲಿನ 40 ಕ್ಕೂ ಹೆಚ್ಚಿನ ಪತ್ರಕರ್ತರು, ಇಬ್ಬರು ಕೇಂದ್ರ ಸಚಿವರು, ವಿಪಕ್ಷ ನಾಯಕರು, ಸೇರಿ 300 ಕ್ಕೂ ಹೆಚ್ಚಿನ ಮಂದಿಯನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಕಳೆದ ವಾರ ಬಹಿರಂಗವಾಗಿತ್ತು. 

ಆದರೆ ಸರ್ಕಾರ ಈ ಆರೋಪವನ್ನು ನಿರಾಕರಿಸುತ್ತಿದೆ. ಲೋಕಸಭೆಯ ಕಲಾಪ ಮುಂದೂಡಲ್ಪಟ್ಟ ವಿರಾಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಶಶಿ ತರೂರ್, ಪೆಗಾಸಸ್ ಸ್ಪೈವೇರ್ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಒಪ್ಪಿಗೆ ನೀಡಬೇಕು, ಆದರೆ ಸರ್ಕಾರ ಒಪ್ಪುತ್ತಿಲ್ಲ. ಆದ್ದರಿಂದ ನಾವು ಯಾಕೆ ಸುಗಮ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. 

ಬೆಲೆ ಏರಿಕೆ ಹಾಗೂ ಕೃಷಿ ಕಾನೂನಿಗೆ ಸಂಬಂಧಿಸಿದ ವಿಚಾರಗಳೂ ಮುಖ್ಯವಾದದ್ದು ಆದರೆ ಪೆಗಾಸಸ್ ಹಗರಣ ಆದ್ಯತೆಯ ವಿಷಯ ಎಂದು ಶಶಿ ತರೂರ್ ಹೇಳಿದ್ದಾರೆ. 

ಇನ್ನು ಇದೇ ವಿಷಯವಾಗಿ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನದ ಮೇಲಿನ ಸಂಸತ್ ಸ್ಥಾಯಿ ಸಮಿತಿ ಗೃಹ ಸಚಿವಾಲಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ಪ್ರಶ್ನಿಸುವ ಸಾಧ್ಯತೆಗಳಿವೆ. 

SCROLL FOR NEXT