ದೇಶ

ಮಾನವ ರಹಿತ ಮಿಷನ್ ಗಗನ್ ಯಾನ್ ಯೋಜನೆ ಡಿಸೆಂಬರ್ ನಲ್ಲಿ ಅಸಾಧ್ಯ: ಇಸ್ರೋ

Srinivas Rao BV

ಬೆಂಗಳೂರು: ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವ ಇಸ್ರೋ ಸಂಸ್ಥೆಯ ಮಹತ್ವಾಕಾಕ್ಷಿ ಯೋಜನೆಯ ಭಾಗವಾಗಿದ್ದ ಮಾನವ ರಹಿತ ಮಿಷನ್ ಗಗನ್ ಯಾನ್ ಡಿಸೆಂಬರ್ ನಲ್ಲಿ ಈಡೇರುವುದು ಅಸಾಧ್ಯ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. 

ಡಿಸೆಂಬರ್ ನಲ್ಲಿ ಮಾನವ ರಹಿತ ಮಿಷನ್ ಗಗನ್ ಯಾನ್ ಯೋಜನೆ ಖಂಡಿತವಾಗಿಯೂ ಸಾಧ್ಯವಿಲ್ಲ, ಇನ್ನೂ ವಿಳಂಬವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾಹಿತಿ ನೀಡಿದ್ದಾರೆ. 

ಈ ಯೋಜನೆ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಲಾಕ್ ಡೌನ್ ನ ಪರಿಣಾಮ ಹಾರ್ಡ್ ವೇರ್ ಉದ್ಯಮದ ಮೇಲೆ ಉಂಟಾಗಿದ್ದು ಇಸ್ರೋ ಸಂಸ್ಥೆಗೆ ಅಗತ್ಯವಿದ್ದ ಉಪಕರಣಗಳ ಪೂರೈಕೆ ವಿಳಂಬವಾಗಿರುವುದು ಯೋಜನೆಯ ವಿಳಂಬಕ್ಕೆ ಕಾರಣವಾಗಿದೆ. 

ವಿನ್ಯಾಸ, ವಿಶ್ಲೇಷಣೆ ಹಾಗೂ ಡಾಕ್ಯುಮೆಂಟೇಷನ್ ಗಳನ್ನು ಇಸ್ರೋ ಮಾಡುತ್ತಿದೆ. ಆದರೆ ಹಾರ್ಡ್ ವೇರ್ ನ್ನು ದೇಶಾದ್ಯಂತ ಇರುವ ಕೈಗಾರಿಕೆಗಳು ಪೂರೈಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಕಡಿಮೆ ಕಕ್ಷೆಯಲ್ಲಿ ಪರಿಭ್ರಮಿಸುವ ಬಾಹ್ಯಾಕಾಶ ನೌಕೆಯಲ್ಲಿ 3 ಮಂದಿಯನ್ನೊಳಗೊಂಡ ತಂಡವನ್ನು ಕಳಿಸುವುದು ಗಗನ್ ಯಾನದ ಉದ್ದೇಶವಾಗಿದೆ 

ಮಾನವರಹಿತ ಮಿಷನ್ ಗಗನ್ ಯಾನ್ ನ್ನು ಡಿಸೆಂಬರ್ 2021 ಕ್ಕೆ ಯೋಜಿಸಲಾಗಿದೆ. ಎರಡನೇ ಮಾನವರಹಿತ ಬಾಹ್ಯಾಕಾಶ ಯೋಜನೆ 2022-23 ಕ್ಕೆ ಚಾಲನೆ ಪಡೆದುಕೊಳ್ಳಲಿದೆ ಎಂದು ಈ ನಂತರ ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಬಾಹ್ಯಾಕಾಶ ರಾಜ್ಯ ಖಾತೆ ಕೇಂದ್ರ ಸಚಿವ (ಸ್ವತಂತ್ರ ನಿರ್ವಹಣೆ) ಜಿತೇಂದ್ರ ಸಿಂಗ್ ಫೆಬ್ರವರಿಯಲ್ಲಿ ಮಾಹಿತಿ ನೀಡಿದ್ದರು.

SCROLL FOR NEXT