ದೇಶ

ಕೋವಿಡ್ -19 ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆಯಿಂದ ನೂರಾರು ಜನರ ಸಾವು- ಬಿಜೆಪಿ ಶಾಸಕ

Nagaraja AB

ಲಖನೌ: ಕೋವಿಡ್-19 ಎರಡನೇ ಅಲೆ ವೇಳೆಯಲ್ಲಿ ಆಕ್ಸಿಜನ್ ಕೊರತೆಯಿಂದ ನೂರಾರು ಜನರು ಸಾವನ್ನಪ್ಪಿರುವುದಾಗಿ ಉತ್ತರ ಪ್ರದೇಶದ ಬಿಜೆಪಿಯ ಶಾಸಕರೊಬ್ಬರು ಹೇಳಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ರಾಜ್ಯಗಳು ಯಾವುದೇ ವರದಿ ನೀಡಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದ ಮಾರನೇ ದಿನವೇ ಅದೇ ಪಕ್ಷದ ಶಾಸಕ ಈ ರೀತಿಯ ಹೇಳಿಕೆ ನೀಡಿರುವುದು ಪಕ್ಷಕ್ಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಬಿಜೆಪಿಯ ಗೋಪಾಮೌ ಶಾಸಕ ಶ್ಯಾಮ್ ಪ್ರಕಾಶ್ ಅವರು ಪತ್ರಕರ್ತ ಆನಂದ್ ಮಿಶ್ರಾ ಅವರ ಫೇಸ್‌ಬುಕ್  ವಾಲ್ ನಲ್ಲಿ ಈ ರೀತಿಯಲ್ಲಿ ಬರೆದಿದ್ದಾರೆ. ಈ ವಿಷಯ ಎತ್ತಿದ ಕೆಲ ಶಾಸಕರ ನ್ಯೂಸ್ ಪೇಪರ್ ಕಟ್ಟಿಂಗ್ ನ್ನು ಆನಂದ್ ಮಿಶ್ರಾ ಪೋಸ್ಟ್ ಮಾಡಿದ್ದರು. ನೀವು ಹೇಳುತ್ತಿರುವುದು ನಿಜ. ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಆಕ್ಸಿಜನ್ ಕೊರತೆಯಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ. ಶಾಸಕ ರಾಜ್ ಕುಮಾರ್ ಅಗರ್ ವಾಲ್ ಸೇರಿದಂತೆ ಯಾರೂ ಕೂಡಾ ಲಕ್ಷಾಂತರ ಕುಟುಂಬಗಳ ನೋವನ್ನು ನೋಡಲಿಲ್ಲ ಎಂದು ಶಾಸಕ ಬರೆದಿದ್ದರು.

ಅಗರ್ ಲಾಲ್ ಸಾಂಡಿಲಾದ ಬಿಜೆಪಿ ಶಾಸಕ. ಕೋವಿಡ್ ಎರಡನೇ ಅಲೆ ವೇಳೆಯಲ್ಲಿ ಇವರ ಪುತ್ರ ಸಾವನ್ನಪ್ಪಿದ್ದರು. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವುದಾಗಿ ಆರೋಪ ಮಾಡಲಾಗಿತ್ತು. ಆದಾಗ್ಯೂ, ಸೋಮವಾರ ಪೇಸ್ ಬುಕ್ ನಲ್ಲಿ ಬರೆಯಲಾದ ವಿಷಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ಯಾಮ್ ಪ್ರಕಾಶ್, ಉತ್ತರ ಪ್ರದೇಶದ ಬಗ್ಗೆ ಬರೆದಿಲ್ಲ ಎಂದು ಹೇಳಿಕೆ ನೀಡಿದ್ದರು.

ಕೋವಿಡ್-19 ಎರಡನೇ ಅಲೆ ವೇಳೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ಯಾವುದೇ ವರದಿಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿಲ್ಲ ಎಂದು ಕಳೆದ ವಾರವಷ್ಟೇ ರಾಜ್ಯಸಭೆಯಲ್ಲಿ  ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತೀ ಪ್ರವೀಣ್ ಪವಾರ್ ಲಿಖಿತ ಹೇಳಿಕೆ ನೀಡಿದ್ದರು. ಈ ಹಿಂದೆ ಕೂಡಾ ಎರಡನೇ ಅಲೆ ಅಸಮರ್ಪಕ ನಿರ್ವಹಣೆ ಕುರಿತಂತೆ ಬಿಜೆಪಿ ಮುಖಂಡರು ದೂರಿದ್ದರು.

SCROLL FOR NEXT