ದೇಶ

ತ್ರಿಪುರಾ: ಪ್ರಶಾಂತ್ ಕಿಶೋರ್ ತಂಡದ ಸದಸ್ಯರಿಗೆ ಜಾಮೀನು ಮಂಜೂರು

Nagaraja AB

ಅಗರ್ತಲಾ: ಬಿಜೆಪಿ ಆಡಳಿತದ ತ್ರಿಪುರದಲ್ಲಿ ಬಂಧಿಸಲಾಗಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ತಂಡದ  23 ಸದಸ್ಯರನ್ನು ಇಂದು ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರಿಗೆ ಜಾಮೀನು ನೀಡಿತು. ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಪೊಲೀಸರು ಭಾನುವಾರ ರಾತ್ರಿ ಅವರನ್ನು ಬಂಧಿಸಿದ್ದರು.

ತ್ರಿಪುರಾಕ್ಕೆ ಆಗಮಿಸಿದ್ದ ಹಿರಿಯ ಟಿಎಂಸಿ ಮುಖಂಡ ಡೆರ್ರಿಕ್ ಒಬ್ರಿಯಾನ್ ಈ ಘಟನೆ ಹಿಂದೆ ಬಿಜೆಪಿಯ ಕೇಂದ್ರಿಯ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು. ಎಸಿಜೆಎಂ ನ್ಯಾಯಾಧೀಶ ಎಸ್ ಬಿ ದಾಸ್ ಐ-ಪ್ಯಾಕ್ ತಂಡದ ಸದಸ್ಯರಿಗೆ ಜಾಮೀನು ಮಂಜೂರು ಮಾಡಿದರು. ಮಂಗಳವಾರ ಎಫ್ ಐಆರ್ ದಾಖಲಾಗಿರುವುದರಿಂದ ಆಗಸ್ಟ್ 1 ರಂದು ಪೊಲೀಸರ ಮುಂದೆ ಹಾಜರಾಗಲು ಅವರಿಗೆ ಸಮನ್ಸ್ ನೀಡಲಾಯಿತು.

ಕೋವಿಡ್ ಪರೀಕ್ಷಾ ವರದಿ ಲಭ್ಯವಾಗುವವರೆಗೆ ಐ-ಪ್ಯಾಕ್ ತಂಡದ ಸದಸ್ಯರು ಹೋಟೆಲ್ ಒಳಗೆ ಇರಬೇಕಾಗುತ್ತದೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಮಂಗಳವಾರ ರಾತ್ರಿ ನೆಗೆಟಿವ್ ವರದಿ ಬಂದಿತ್ತು. ಐ- ಪ್ಯಾಕ್ ತಂಡದ ಸದಸ್ಯರ ಮೇಲಿನ ಕಿರುಕುಳಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಸ್ ದಾಖಲಿಸುವುದಾಗಿ ಅವರ ಪರ ವಕೀಲ ಪಿಜುಶ್ ಕಾಂತಿ ಬಿಸ್ವಾಸ್ ಹೇಳಿದರು. 

 ಉಪ - ವಿಭಾಗೀಯ ಮ್ಯಾಜಿಸ್ಟ್ರೇಟ್ ಸಾದಾರ್, ಪ್ರಶಾಂತ್ ಕಿಶೋರ್ ತಂಡದ ವಿರುದ್ಧ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪೂರ್ವ ಅಗರ್ತಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 1 ರಂದು ಭೇಟಿ ಮಾಡುವಂತೆ ವಿಚಾರಣಾಧಿಕಾರಿ ನೋಟಿಸ್ ನೀಡಿದ್ದಾರೆ. ಬಂಧನದ ಭೀತಿಯಿಲ್ಲ. ಆದರೆ, ಈಗ, ಅವರು ನ್ಯಾಯಾಲಯ ಮುಂದೆ ಹಾಜರಾಗಿ ಜಾಮೀನಿಗಾಗಿ ಮೊರೆ ಇಟ್ಟರು. ನ್ಯಾಯಾಲಯ ಜಾಮೀನು ನೀಡಿತು ಎಂದು ಹೆಚ್ಚುವರಿ ಪಬ್ಲಿಕ್ ಪ್ಯಾಸಿಕ್ಯೂಟರ್ ಬಿದ್ಯುತ್ ಸೂತ್ರಧರ್ ಸುದ್ದಿಗಾರರಿಗೆ ತಿಳಿಸಿದರು.

SCROLL FOR NEXT