ದೇಶ

ಲಾಕ್ ಡೌನ್ ಸಡಿಲಿಕೆ, ನಿಯಮ ಪಾಲನೆ ನಿರ್ಲಕ್ಷ್ಯ ಕೋವಿಡ್-19 ಏರಿಕೆಗೆ ಕಾರಣ: ಕೇಂದ್ರ

Srinivas Rao BV

ನವದೆಹಲಿ: ಲಾಕ್ ಡೌನ್ ಸಡಿಲಿಕೆ, ಸಮುದಾಯಗಳಲ್ಲಿ ಕೋವಿಡ್-19 ನಿಯಮ ಪಾಲನೆಯೆಡೆಗೆ ತೋರುತ್ತಿರುವ ನಿರ್ಲಕ್ಷ್ಯಗಳು ಕೋವಿಡ್-19 ಪ್ರಕರಣಗಳ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಕೇರಳ, ಅರುಣಾಚಲ ಪ್ರದೇಶ, ತ್ರಿಪುರಾ, ಒಡಿಶಾ, ಚತ್ತೀಸ್ ಗಢ, ಮಣಿಪುರ ಸೇರಿದಂತೆ ಹಲವು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬಗ್ಗೆ ಕೇಳಿದ ಬಗ್ಗೆ ಉತ್ತರಿಸುವಾಗ ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಲೋಕಸಭೆಗೆ ತಿಳಿಸಿದೆ.

ಆರೋಗ್ಯ ಸಚಿವಾಲಯದ ರಾಜ್ಯಖಾತೆ ಸಚಿವರಾದ ಭಾರತತಿ ಪ್ರವೀಣ್ ಪವಾರ್ ಲಿಖಿತ ಉತ್ತರ ನೀಡಿದ್ದು, ಹೊಸ ರೂಪಾಂತರಿಗಳು ಎದುರಾಗುತ್ತಿದ್ದರೂ ಡಬ್ಲ್ಯುಹೆಚ್ಒ ಮಾಹಿತಿಯ ಪ್ರಕಾರ ಹೆಚ್ಚು ಪ್ರಸರಣಕ್ಕೆ ಕೋವಿಡ್-19 ನ ಡೆಲ್ಟಾ-ಡೆಲ್ಟಾ ಪ್ಲಸ್ ರೂಪಾಂತರಿಗಳೂ ಕಾರಣ ಎಂದು ಹೇಳಿದ್ದಾರೆ.

ಹೊಸ ರೂಪಾಂತರಿಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರೊಂದಿಗೆ ಚರ್ಚಿಸಲಾಗಿದ್ದು, ಈಗಿರುವ ವೈದ್ಯಕೀಯ ಚಿಕಿತ್ಸಾ ವಿಧಾನಗಳೇ ಹೊಸ ರೂಪಾಂತರಿಗಳಿಂದ ಉಂಟಾಗುತ್ತಿರುವ ಸೋಂಕಿನ ಚಿಕಿತ್ಸೆಗೂ ಅನ್ವಯಿಸಲಿದೆ, ಈ ವರೆಗೂ ಹೊಸ ರೂಪಾಂತರಿಗಳಿಗೆ ಚಿಕಿತ್ಸೆಗೆ ಸಂಬಂಧಿಸಿದ ಶಿಷ್ಟಾಚಾರವನ್ನು ಬದಲಾವಣೆಯ ಅಗತ್ಯ ಇಲ್ಲ ಎಂದು ಪವಾರ್ ಹೇಳಿದ್ದಾರೆ.

ಡೆಲ್ಟಾ, ಡೆಲ್ಟಾ ಪ್ಲಸ್, ಲಾಂಬ್ಡಾ ರೂಪಾಂತರಿಗಳು ದೇಶದ ಕೆಲವು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕಿಗೆ ಕಾರಣವೇ? ಎಂಬ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

ಇದೇ ವೇಳೆ ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಸಚಿವರು ಮಾಹಿತಿ ನೀಡಿದ್ದು, "ಆರೋಗ್ಯ ವಿಷಯ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ವಿಷಯವಾಗಿದ್ದರೂ, ಕೇಂದ್ರ ಸರ್ಕಾರ ಸಾಂಕ್ರಾಮಿಕ ತಡೆಗೆ ಅಗತ್ಯವಿರುವ ತಾಂತ್ರಿಕ ಸಲಹೆ, ಆರ್ಥಿಕ ನೆರವು, ಲಾಜಿಸ್ಟಿಕ್ ಗಳ ನೆರವನ್ನು ನೀಡಿದೆ" ಎಂದು ಹೇಳಿದ್ದಾರೆ.
 

SCROLL FOR NEXT