ದೇಶ

ಪ್ರಾದೇಶಿಕ ಭಾಷೆಗಳಲ್ಲಿ ತಂತ್ರಜ್ಞಾನ ಶಿಕ್ಷಣ; ಯುವಜನರ ಕನಸುಗಳ ಸಾಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ: ಪ್ರಧಾನಿ ಮೋದಿ

Srinivasamurthy VN

ನವದೆಹಲಿ:  ದೇಶದ ಕೋಟ್ಯಂತರ ಯುವಜನರ ಕನಸುಗಳ ಸಾಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ - ಎನ್‌ಇಪಿ ಪೂರಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಎನ್‌ಇಪಿ ಪ್ರಥಮ ವರ್ಷಾಚರಣೆ ಅಂಗವಾಗಿ ದೇಶದ ಶೈಕ್ಷಣಿಕ ಸಮುದಾಯವನ್ನುದ್ದೇಶಿಸಿ ಇಂದು ಭಾಷಣ ಮಾಡಿದ ಅವರು, ದೇಶದ ಉಜ್ವಲ ಭವಿಷ್ಯದಲ್ಲಿ ಈ ನೀತಿ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಕೋವಿಡ್ ಸಂಕಷ್ಟದಿಂದಾಗಿ ಇಡೀ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದರೂ, ವಿದ್ಯಾರ್ಥಿ ಮತ್ತು ಬೋಧಕ ಸಮುದಾಯ ಕ್ಷಿಪ್ರವಾಗಿ ಬದಲಾವಣೆಗೆ ಹೊಂದಿಕೊಂಡು ಆನ್‌ಲೈನ್ ಶಿಕ್ಷಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು.

ನೂತನ ಶಿಕ್ಷಣ ನೀತಿಯಡಿ ಪರೀಕ್ಷೆಗಳ ಅನಗತ್ಯ ಒತ್ತಡದಿಂದ ವಿದ್ಯಾರ್ಥಿ ಸಮುದಾಯವನ್ನು ಮುಕ್ತಗೊಳಿಸಿದ್ದು, ಯುವಜನರ ಕನಸನ್ನು ನನಸಾಗಿಯೀ ನೀತಿ ಬಲ ನೀಡಲಿದೆ; ಈ ಮುನ್ನ ಉನ್ನತ ಮತ್ತು ವೃತ್ತಿಪರ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಿದ್ದರು. ಆದರೆ ಎನ್‌ಇಪಿ ಅಡಿಯಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಇನ್ನು ಮುಂದೆ ಭಾರತದಲ್ಲೇ ದೊರೆಯಲಿದೆ. ಅಲ್ಲದೆ ಶಿಕ್ಷಣ ಮಾಧ್ಯಮ ಆಯ್ಕೆಗೂ ಈ ನೀತಿಯಲ್ಲಿ ವಿಪುಲ ಅವಕಾಶ ದೊರಕಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಬಹುದಾಗಿದೆ ಎಂದರು ಅವರು ತಿಳಿಸಿದರು. 

ಪ್ರಾದೇಶಿಕ ಭಾಷೆಗಳಲ್ಲಿ ತಂತ್ರಜ್ಞಾನ ಶಿಕ್ಷಣ
ಈಗಾಗಲೇ ೮ ರಾಜ್ಯಗಳ ೧೪ ಇಂಜಿನಿಯರಿಂಗ್ ಕಾಲೇಜುಗಳು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಆರಂಭಿಸಿವೆ. ದೇಶದ ೧೧ ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಪಠ್ಯಕ್ರಮ ಒದಗಿಸಲು ಭಾಷಾಂತರ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು.

ಇದೇ ವೇಳೆ ಪ್ರಧಾನಮಂತ್ರಿ ಅವರು, ಪ್ರಾದೇಶಿಕ ಭಾಷೆಗಳಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್‌ಗೆ ಚಾಲನೆ ನೀಡಿ, ಉನ್ನತ ಶಿಕ್ಷಣದಲ್ಲಿ ವಿವಿಧ ವಿಷಯಗಳ ಕಲಿಕೆಗೆ ಪ್ರವೇಶ ಮತ್ತು ನಿರ್ಗಮನ ಆಯ್ಕೆಯ ಯೋಜನೆ ಉದ್ಘಾಟಿಸಿದರು; ಉನ್ನತ ಶಿಕ್ಷಣವನ್ನು ಅಂತಾರಾಷ್ಟ್ರೀಯಗೊಳಿಸುವ ಕಾರ್ಯಕ್ರಮದ ಮಾರ್ಗಸೂಚಿ ಬಿಡುಗಡೆ ಮಾಡಿದರು.

ಒಂದನೇ ತರಗತಿಗೆ ಪೂರಕವಾದ ಕ್ರೀಡೆ ಆಧಾರಿತ ಮೂರು ತಿಂಗಳ ವಿದ್ಯಾ ಪ್ರವೇಶ ಕಾರ್ಯಕ್ರಮ, ಶಿಕ್ಷಕರಿಗೆ ತರಬೇತಿ ನೀಡುವ ನಿಷ್ಠಾ ೨.೦ ಸೇರಿದಂತೆ ವಿವಿಧ ಶೈಕ್ಷಣಿಕ ಯೋಜನೆಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಿದರು. 
 

SCROLL FOR NEXT