ದೇಶ

ಭಾರತ-ಚೀನಾ ಕಮಾಂಡರ್ ಹಂತದ ಸಭೆ: ಸೇನೆ ಹಿಂಪಡೆತದ ಕುರಿತು ಗಂಭೀರ ಚರ್ಚೆ

Srinivasamurthy VN

ನವದೆಹಲಿ: ಭಾರತ ಮತ್ತು ಚೀನಾ ಸೇನೆಗಳ ನಡುವಿನ ಕಾರ್ಪ್ಸ್ ಕಮಾಂಡರ್-ಮಟ್ಟದ 12 ನೇ ಸುತ್ತಿನ ಚರ್ಚೆ ನಡೆಯುತ್ತಿದ್ದು, ಗೋಗ್ರ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶ ಸೇರಿದಂತೆ ಘರ್ಷಣೆಯ ಕೇಂದ್ರಬಿಂದು ಗಡಿಗಳಲ್ಲಿ ಉಭಯ ಸೇನೆಗಳನ್ನು ಹಿಂಪಡೆಯುವ ಕುರಿತು ಉನ್ನತ ಮಟ್ಟದ ಚರ್ಚೆ ನಡೆಯುತ್ತಿದೆ  ಎಂದು ಹೇಳಲಾಗಿದೆ.

ಭಾರತ ಮತ್ತು ಚೀನಾ ನಡುವಿನ 12ನೇ ಸುತ್ತಿನಲ್ಲಿ ಕಮಾಂಡರ್-ಮಟ್ಟದ ಮಾತುಕತೆಗಳು ಮೊಲ್ಡೊದ ನೈಜ ನಿಯಂತ್ರಣದ ರೇಖೆಯಲ್ಲಿ ಪ್ರಾರಂಭವಾಯಿತು. ಭಾರತ ಮತ್ತು ಚೀನಾ ಈಗಾಗಲೇ ಪ್ಯಾಂಗೋಂಗ್ ಸರೋವರದ ಗಡಿ ಪ್ರದೇಶಗಳಲ್ಲಿ, ಗೋಗ್ರಾ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ ಪ್ರದೇಶಗಳಲ್ಲಿನ ಸೇನಾ  ನಿಯೋಜನೆಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಮೂಲಗಳ ಪ್ರಕಾರ ಚೀನಾ ಸೈನಿಕಾಧಿಕಾರಿಗಳು ಸೇನೆ ಹಿಂಪಡೆಯುವ ಕುರಿತು ಸಕಾರಾತ್ಮಕ ಮಾಹಿತಿ ನೀಡಿದ್ದು, ಕಳೆದ ವರ್ಷ ಚೀನೀ ಆಕ್ರಮಣ ಮಾಡಿಕೊಂಡಿದ್ದ ಪೋಸ್ಟ್ ಗಳನ್ನು  ತೆರವುಗೊಳಿಸುವ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ.

ಎರಡು ದೇಶಗಳು ಕಳೆದೊಂದು ವರ್ಷ ವಿವಾದಿತ ಗಡಿ ಪ್ರದೇಶದಲ್ಲಿ ಮಿಲಿಟರಿ ನಿಲುಗಡೆಯಲ್ಲಿ ತೊಡಗಿಸಿಕೊಂಡಿದ್ದವು. ಆದರೆ ಮಿಲಿಟರಿ ಮತ್ತು ರಾಜಕೀಯ ಮಟ್ಟಗಳಲ್ಲಿ ವ್ಯಾಪಕ ಮಾತುಕತೆಗಳ ನಂತರ ಕಳೆದ ತಿಂಗಳ ಅವಧಿಯಲ್ಲಿ ಅತ್ಯಂತ ವಿವಾದಾಸ್ಪದ ಪ್ಯಾಂಗೋಂಗ್ ಲೇಕ್ ಪ್ರದೇಶದಿಂದ ಸೇನೆ  ಹಿಂಪಡೆಯಲು ಈ ಹಿಂದಿನ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರೆ ಚೀನಾ ಕೂಡ ತನ್ನ ಹಲವು ಸೇನಾ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು. 

ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಸಭೆ ನಡೆಸಿ ಚೀನಾ ಸಹವರ್ತಿಗಳೊಂದಿಗೆ ಪರಿಸ್ಥಿತಿಯ ಗಂಭೀರತೆಯ ಕುರಿತು ಮಾತುಕತೆ ನಡೆಸಿದ್ದರು. ಈ ಹಿಂದೆ ನಡೆದ 11 ಸುತ್ತಿನ ಮಾತುಕತೆಗಳಲ್ಲಿ  ವಿವಾದಿತ ಪ್ಯಾಂಗೋಂಗ್ ಲೇಕ್ ಪ್ರದೇಶದಿಂದ ಸೇನೆ ಹಿಂಪಡೆಯುವ ಕುರಿತ ಚರ್ಚೆಯೇ ಪ್ರಮುಖವಾಗಿತ್ತು ಎಂದು ಮೂಲಗಳು ತಿಳಿಸಿವೆ. 
 

SCROLL FOR NEXT