ದೇಶ

ಮಹಾರಾಷ್ಟ್ರದಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆ, ಆತಂಕಪಡುವ ಅಗತ್ಯವಿಲ್ಲ- ಅಧಿಕಾರಿಗಳು

Nagaraja AB

ಮುಂಬೈ: ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಿಂದ ಮೊದಲ ಜಿಕಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯೊಂದರಲ್ಲಿ ಶನಿವಾರ ತಿಳಿಸಲಾಗಿದೆ.

ಮಹಿಳಾ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆಕೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯಾವುದೇ ರೋಗಲಕ್ಷಣಗಳು ಇಲ್ಲ ಎಂದು ಹೇಳಲಾಗಿದೆ. ಪುರಂದರ್ ತೆಹಸಿಲ್ ನ ಬೆಲ್ಸಾರ್ ಗ್ರಾಮದ ನಿವಾಸಿಯಾದ 50 ವರ್ಷದ ಮಹಿಳೆ ಶುಕ್ರವಾರ ಮೊದಲ ಪರೀಕ್ಷಾ ವರದಿ ಪಡೆದಿದ್ದಾರೆ.

ಜಿಕಾ ವೈರಸ್ ಅಲ್ಲದೇ, ಚಿಕುನ್ ಗುನ್ಯಾ ವೈರಸ್ ಸೋಂಕು ಕೂಡಾ ಅವರಿಗೆ ತಗುಲಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಶನಿವಾರ ಸರ್ಕಾರಿ ವೈದ್ಯಕೀಯ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮದ ಪ್ರಮುಖರು ಮತ್ತು ಪಂಚಾಯತ್ ಸದಸ್ಯರನ್ನು ಭೇಟಿ ಮಾಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಈಡಿಸ್ ಈಜಿಪ್ಟಿ ಸೊಳ್ಳೆಯ ಕಡಿತದ ಮೂಲಕ ಜಿಕಾ ವೈರಸ್ ಹರಡುತ್ತದೆ ಮತ್ತು ಹೆಚ್ಚಿನ ರೋಗಿಗಳಿಗೆ ಯಾವುದೇ ಲಕ್ಷಣಗಳು ಇರುವುದಿಲ್ಲ. ಜ್ವರ, ಮೈಕೈ ನೋವು ಮತ್ತಿತರ ವಿಶಿಷ್ಠ ಲಕ್ಷಣಗಳಿರುತ್ತದೆ. ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

SCROLL FOR NEXT