ದೇಶ

ಬಿಹಾರ: ಲಾಕ್ ಡೌನ್ ನಲ್ಲಿ 1200 ಕಿ.ಮೀ. ಸೈಕಲ್ ತುಳಿದು ತಂದೆಯನ್ನು ಮನೆಗೆ ಕರೆತಂದಿದ್ದ ಬಾಲಕಿಯ ತಂದೆ ಸಾವು!

Srinivasamurthy VN

ದರ್ಬಂಗಾ: ಕಳೆದ ವರ್ಷ ದೇಶಾದ್ಯಂತ ದಿಢೀರ್ ಲಾಕ್ಡೌನ್ ಹೇರಿದ್ದಾಗ ಬರೊಬ್ಬರಿ 1200 ಕಿ.ಮೀ ಸೈಕಲ್ ತುಳಿದು ತನ್ನ ತಂದೆಯನ್ನು ಮನೆಗೆ ಕರೆತಂದಿದ್ದ ಬಿಹಾರದ ಬಾಲಕಿಯ ತಂದೆ ಸಾವನ್ನಪ್ಪಿದ್ದಾರೆ.

ಹೌದು.. ಬಿಹಾರದ ದರ್ಬಂಗಾ ಜಿಲ್ಲೆಯ 13 ವರ್ಷದ ಸೈಕಲ್ ಬಾಲಕಿ ಜ್ಯೋತಿ ಕುಮಾರಿ ಅವರ ತಂದೆ ಸೋಮವಾರ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಡಾ.ಎಸ್.ಎಂ.ತ್ಯಾಗರಾಜನ್ ಅವರು ಮಾಹಿತಿ ನೀಡಿದ್ದು, ಬಾಲಕಿಯ ತಂದೆ ಮೋಹನ್ ಪಾಸ್ವಾನ್ ಅವರು  ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ. ದರ್ಬಂಗಾ ಜಿಲ್ಲೆಯ ಸಿರ್ಹುಲ್ಲಿ ಗ್ರಾಮದ ನಿವಾಸಿಯಾಗಿದ್ದ ಅವರು ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದು, ಮೃತರಿಗೆ ನೆರವು ಮತ್ತು ಗೌರವ ಸಲ್ಲಿಸಲು ಸಂಬಂಧಪಟ್ಟ ಸಿಂಗ್‌ಬರಾ ಬ್ಲಾಕ್‌ನ ಬಿಡಿಒ ಅವರನ್ನು ಗ್ರಾಮಕ್ಕೆ ಕಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಏನಿದು ಘಟನೆ?
2020 ರ ಮಾರ್ಚ್‌ ಅಂತ್ಯದಲ್ಲಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಮಯದಲ್ಲಿ ಹದಿಮೂರು ವರ್ಷದ ಜ್ಯೋತಿ ಕುಮಾರಿ ಅವರು ತಮ್ಮ ತಂದೆಯನ್ನು ಗುರುಗ್ರಾಮದಿಂದ ಬಿಹಾರದಲ್ಲಿರುವ ತಮ್ಮ ಗ್ರಾಮಕ್ಕೆ ಕರೆತರಲು ಬರೋಬ್ಬರಿ 1200 ಕಿ.ಮೀ ಸೈಕಲ್ ತುಳಿದಿದ್ದರು. ಮೋಹನ್ ಪಾಸ್ವಾನ್  ಗುರುಗ್ರಾಮದಲ್ಲಿ ಆಟೋ ಓಡಿಸಿಕೊಂಡು ಬದುಕುತ್ತಿದ್ದ. ಆತನ ಕುಟುಂಬ ಪೂರ್ತಿ ಬಿಹಾರದ ದರ್ಬಾಂಗ್ ಜಿಲ್ಲೆಯ ಸಿರ್ತುಲ್ಲಿ ಗ್ರಾಮದಲ್ಲಿ ನೆಲೆಸಿತ್ತು. ಕಳೆದ ವರ್ಷ ಜನವರಿಯಲ್ಲಿ ಮೋಹನ್‌ಗೆ ಅಪಘಾತವಾಗಿದ್ದರಿಂದಾಗಿ ಆತನನ್ನು ನೋಡಿಕೊಳ್ಳಲೆಂದು ಮಗಳು ಜ್ಯೋತಿ ಗುರುಗ್ರಾಮಕ್ಕೆ ತೆರಳಿದ್ದಳು. ಇದ್ದ ಒಂದು ಆಟೋವನ್ನೂ ಅದರ ಮಾಲೀಕ ತೆಗೆದುಕೊಂಡು ಹೋಗಿದ್ದನಂತೆ. ಅದೇ ಸಮಯಕ್ಕೆ ಸರಿಯಾಗಿ ಲಾಕ್‌ಡೌನ್ ಘೋಷಿಸಲಾಯಿತು, ಕೆಲಸವೂ ಇಲ್ಲದೆ ಗುರುಗ್ರಾಮದಲ್ಲಿ ಜೀವಿಸುವುದು ಕಷ್ಟವೆಂದು ಅರಿತ ಜ್ಯೋತಿ 400 ರೂಪಾಯಿಗೆ ಸೈಕಲ್ ಒಂದನ್ನು ಖರೀದಿಸಿ ಅದರಲ್ಲಿ ತಂದೆಯನ್ನು ಕೂರಿಸಿಕೊಂಡು  ಉರಿವ ಕಡೆ ಮುಖ ಮಾಡಿದ್ದಳು. ಬರೋಬ್ಬರಿ 8 ದಿನಗಳ ನಂತರ ಅವರು ಮನೆ ಸೇರಿದ್ದರು.

ಈ ಘಟನೆಗೆ ಇಡೀ ವಿಶ್ವವೇ ಮರುಕ ಪಟ್ಟಿತ್ತು. ಮಾಧ್ಯಮಗಳು ಬಾಲಕಿ ಜ್ಯೋತಿಯ ಸೈಕಲ್ ಪ್ರಯಾಣದ ಬಗ್ಗೆಗಿನ ವರದಿಯನ್ನು ಮಾಡಿದ ನಂತರ ಬಾಲಕಿಯನ್ನು ಬಿಹಾರದ ‘ಸೈಕಲ್‌ ಹುಡುಗಿ’ ಎಂದು ಕರೆಯಲಾಗಿತ್ತು. ಅಲ್ಲದೆ, ಅಧಿಕಾರಿಗಳು ಆಕೆಗೆ ಕ್ರೀಡಾ ಬೈಸಿಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು.  ಜೊತೆಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಹಲವಾರು ರೀತಿಯ ನೆರವನ್ನು ಘೋಷಿಸಲಾಗಿತ್ತು. 

ಸಿನಿಮಾದಲ್ಲಿ ಅಭಿನಯಿಸಲು ಸಜ್ಜಾಗಿದ್ದ ಬಾಲಕಿ
ಕಳೆದ ವರ್ಷ ಲಾಕ್ಡೌನ್ ವೇಳೆ ಬಿಹಾರ ಮೂಲದ ಬಾಲಕಿಯ ತಂದೆ ಮೋಹನ್ ಪಾಸ್ವಾನ್ ಗುರುಗಾಂವ್ ನಲ್ಲಿ ಸಿಲುಕಿಕೊಂಡಿದ್ದರು. ಯಾವುದೇ ವಾಹನ ಇಲ್ಲದ ಕಾರಣ ಪಾಸ್ವಾನ್ ಅವರ ಪುತ್ರಿ ಜ್ಯೋತಿ ಕುಮಾರಿ ತಂದೆಯನ್ನು ಸೈಕಲ್ ಹಿಂಭಾಗದಲ್ಲಿ ಕೂರಿಸಿ 1200 ಕಿ.ಮೀ.ದೂರದಲ್ಲಿರುವ ತಮ್ಮ ಹಳ್ಳಿಗೆ  ಕರೆತಂದಿದ್ದಳು. ಇದೀಗ ಇದೇ ಕಥಾಹಂದರವನ್ನು ಆಧರಿಸಿ ಚಿತ್ರತಂಡವೊಂದು ಸಿನಿಮಾ ಮಾಡಲು ಮುಂದಾಗಿದೆ. ತನ್ನ ಸಾಹಸಮಯ ಪ್ರಯಾಣದ ಕುರಿತು ಹೊರಬರುವ ಚಿತ್ರದಲ್ಲಿ ನಟಿಸಲು ಜ್ಯೋತಿ ಸಜ್ಜಾಗಿದ್ದರು. ಆತ್ಮನಿರ್ಭರ್ (ಸ್ವಾವಲಂಬಿ) ಎಂಬ ಹೆಸರಿನ ಚಿತ್ರದಲ್ಲಿ ಅವರು ಸ್ವತಃ ನಟಿಸಲು ನಿರ್ಧರಿಸಿದ್ದರು.  ಈ ಮಧ್ಯೆಯೇ ಆಕೆಯ ತಂದೆ ವಿಧಿವಶರಾಗಿದ್ದಾರೆ.

SCROLL FOR NEXT